ಈ ಬಾರಿ ನಡೆದಿರುವುದು 17 ನೇ ಲೋಕಸಭಾ ಚುನಾವಣೆ. ಈ ಚುನಾವಣೆಯು ಹತ್ತಾರು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕದ ಸುದ್ದಿಯನ್ನೇ ತೆಗೆದುಕೊಂಡರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೇ ತುಮಕೂರು ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.
ಇದು ಮಾತ್ರ ಅಲ್ಲ ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಅವರಿಗೆ ಸೋಲಾಗಿದೆ. ಅಲ್ಲಿ ಬಿಜೆಪಿಯ ಬಚ್ಚೇಗೌಡ ಗೆದ್ದಿದ್ದಾರೆ.
ಇವೆಲ್ಲಕ್ಕಿಂತ ಮಿಗಿಲಾಗಿ, ಗುರು ಶಿಷ್ಯರ ಕಾಳಗಕ್ಕೆ ಸಾಕ್ಷಿಯಾಗಿದ್ದ ಕಲಬುರಗಿಯಲ್ಲಿ ಶಿಷ್ಯ ಗುರುವನ್ನು ಸೋಲಿಸಿ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಉಮೇಶ್ ಜಾಧವ್, ತನ್ನ ರಾಜಕೀಯ ಗುರು, ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಗೆದ್ದಿದ್ದಾರೆ. ಗುರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಉಮೇಶ್ ಜಾಧವ್ ಮೊದಲ ಸಲ ಸಂಸತ್ ಪ್ರವೇಶಿಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಪಡೆದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಕಲ್ಪಿಸಿಕೊಳ್ಳಲು ಅಸಾಧ್ಯವಾದ ಸೋಲಾಗಿದೆ.
ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ. ಮೊದಲ ಬಾರಿಗೆ ಸುಮಲತಾ ಸಂಸತ್ ಪ್ರವೇಶ ಮಾಡುತ್ತಿದ್ದಾರೆ.
ಇಡೀ ದೇಶದಲ್ಲಿ ಎನ್ಡಿಯೇ ಮತ್ತೊಮ್ಮೆ ಘರ್ಜಿಸಿದೆ. ಯುಪಿಎ ಸೋತು ಸುಣ್ಣಾಗಿದೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಲಿದ್ದಾರೆ.