ಗೂಗಲ್ ಮೂಲಕ ಕೊವಿಡ್ ಲಸಿಕೆ ಲಭ್ಯತೆ ತಿಳಿಯಲು ಹೀಗೆ ಮಾಡಿ

0
49

ಭಾರತದಲ್ಲಿ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆಯು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ದೇಶದ 13,000 ಕೇಂದ್ರಗಳಲ್ಲಿ ಲಸಿಕೆಯ ಕುರಿತು ಮಾಹಿತಿ ಹಾಗೂ ಲಭ್ಯತೆಯ ಬಗ್ಗೆ ಗೂಗಲ್ ಮೂಲಕ ನೀವು ತಿಳಿದುಕೊಳ್ಳಬಹುದು. ಇಂಥದೊಂದು ಯೋಜನೆಯು ಇದೇ ವಾರದಿಂದ ಜಾರಿಗೆ ಬರಲಿದೆ.

ಕೊವಿನ್ ಅಪ್ಲಿಕೇಷನ್ ಒದಗಿಸುವ ವಾಸ್ತವಿಕ ದತ್ತಾಂಶವನ್ನು ಆಧರಿಸಿ ಪ್ರತಿಯೊಂದು ಲಸಿಕೆ ಕೇಂದ್ರದಲ್ಲಿ ಎಷ್ಟು ಪ್ರಮಾಣದ ಲಸಿಕೆ ಲಭ್ಯವಿದೆ ಎಂಬುದರ ಮಾಹಿತಿಯನ್ನು ನೀಡಲಾಗುತ್ತದೆ. ಮೊದಲ ಡೋಸ್ ಹಾಗೂ ಎರಡನೇ ಡೋಸ್ ಪ್ರಮಾಣ ಎಷ್ಟಿದೆ. ಹಣ ಪಾವತಿಸುವ ಮತ್ತು ಉಚಿತ ಲಸಿಕೆ ಪ್ರಮಾಣ ಎಷ್ಟಿದೆ ಎಂಬುದರ ಎಲ್ಲ ಮಾಹಿತಿಯನ್ನು ಕುಳಿತಲ್ಲೇ ಪಡೆದುಕೊಳ್ಳಬಹುದು. ತದನಂತರ ಕೊವಿನ್ ಅಪ್ಲಿಕೇಶನ್ ಮೂಲಕ ಲಸಿಕೆಗಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಗೂಗಲ್ ಬಳಕೆದಾರರು ತಮ್ಮ ಹತ್ತಿರದ ಲಸಿಕೆ ಕೇಂದ್ರಗಳನ್ನು ಹುಡುಕಿದಾಗ ಅಥವಾ Google ಹುಡುಕಾಟ, ನಕ್ಷೆಗಳು ಮತ್ತು ಗೂಗಲ್ ಅಸಿಸ್ಟೆಂಟ್‌ನ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಹುಡುಕಿದಾಗ ಮಾಹಿತಿ ಸ್ವಯಂಚಾಲಿತವಾಗಿ ತೋರಿಸುತ್ತದೆ. ಇಂಗ್ಲಿಷ್ ಜೊತೆಗೆ ಬಳಕೆದಾರರು ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ ಮತ್ತು ಮರಾಠಿ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲೂ ಲಸಿಕೆ ಬಗ್ಗೆ ಹುಡುಕಬಹುದು.

2021ರ ಮಾರ್ಚ್‌ ತಿಂಗಳಿನಿಂದ ಗೂಗಲ್ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಭಾಗಿತ್ವದಲ್ಲಿ COVID-19 ಲಸಿಕೆ ಕೇಂದ್ರಗಳ ಮಾಹಿತಿ ತೋರಿಸಲು ಪ್ರಾರಂಭಿಸಿತು. “ಜನರು ತಮ್ಮ ಜೀವನವನ್ನು ನಿರ್ವಹಿಸಲು ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಲೇ ಇರುವುದರಿಂದ, ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಧಿಕೃತ ಮತ್ತು ಸಕಾಲಿಕ ಮಾಹಿತಿ ಹುಡುಕಲು ಮತ್ತು ಹಂಚಿಕೊಳ್ಳಲು ನಾವು ಬದ್ಧರಾಗಿರುತ್ತೇವೆ” ಎಂದು ಗೂಗಲ್ ಸರ್ಚ್‌ನ ನಿರ್ದೇಶಕಿ ಹೇಮಾ ಬುಡರಾಜು ಹೇಳಿದ್ದಾರೆ.

 

 

LEAVE A REPLY

Please enter your comment!
Please enter your name here