ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ತಮ್ಮ ಮಗಳ ಗ್ರಾಮ ವಾಸ್ತವ್ಯ ಮಾಡಿದ್ದು, ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ ತಂಗಿದ್ದಾರೆ. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ.

ಕುಮಾರಸ್ವಾಮಿಯವರು ಊಟವನ್ನೂ ಸೇವಿಸದೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ್ದು, ರಾತ್ರಿ ಮಲಗುವುದಕ್ಕೂ ಮುನ್ನ ಸಚಿವರು ಹಾಗೂ ಶಾಸಕರುಗಳೊಂದಿಗೆ ಕುಶಲೋಪರಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಚಿವರುಗಳಾದ ರಾಜಶೇಖರ ಪಾಟೀಲ್, ಬಂಡೆಪ್ಪ ಕಾಶೆಂಪುರ, ವೆಂಕಟರಾವ್ ನಾಡಗೌಡ, ಸಾರಾ ಮಹೇಶ್ ಮೊದಲಾದವರಿದ್ದರು.
ಇಂದು ಬೆಳಿಗ್ಗೆ ಆರು ಗಂಟೆಗೆ ಎಚ್ಚರಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದಿನನಿತ್ಯದ ಕ್ರಿಯಾಕರ್ಮಗಳನ್ನು ಪೂರ್ಣಗೊಳಿಸಿ ಸಚಿವರೊಂದಿಗೆ ಬಿಸಿಕಾಫಿ ಸೇವಿಸಿದ್ದಾರೆ ಬಳಿಕ ದಿನಪತ್ರಿಕೆಗಳನ್ನು ಓದಿದ ಮುಖ್ಯಮಂತ್ರಿಗಳು ತಮ್ಮೊಂದಿಗಿದ್ದ ಸಚಿವರು ಹಾಗೂ ಶಾಸಕರುಗಳೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.






