ಚಳಿಗಾಲದಲ್ಲಿ ದೊಡ್ಡಪತ್ರೆ ಎಲೆಗಳ ಸೇವನೆಯಿಂದ ಎಷ್ಟು ಪ್ರಯೋಜನಗಳಿವೆ ಗೊತ್ತಾ..?
ಪ್ರಕೃತಿಯಲ್ಲಿ ನಮ್ಮ ಆರೋಗ್ಯಕ್ಕೆ ಅಮೂಲ್ಯವಾದ ಅನೇಕ ಔಷಧೀಯ ಸಸ್ಯಗಳು ದೊರೆಯುತ್ತವೆ. ಅವುಗಳಲ್ಲಿ ನಾವು ಸಾಮಾನ್ಯವಾಗಿ ಕಡೆಗಣಿಸುವ ಒಂದು ಗಿಡ ಎಂದರೆ ದೊಡ್ಡಪತ್ರೆ, ಅಂದರೆ ಸಾಂಬಾರ್ ಸೊಪ್ಪು. ವಿಟಮಿನ್ C, ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ ಹಾಗೂ ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಹೊಂದಿರುವ ಈ ಎಲೆ ನಮ್ಮ ಆರೋಗ್ಯಕ್ಕೆ ಬಹುಪರಿಣಾಮಕಾರಿ.
ಶೀತ–ಕೆಮ್ಮು ತಡೆಯುವಲ್ಲಿ ಪರಿಣಾಮಕಾರಿ
ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಶೀತ ಮತ್ತು ಕೆಮ್ಮಿನ ಸಮಸ್ಯೆಗಳನ್ನು ಕಡಿಮೆ ಮಾಡಲು ದೊಡ್ಡಪತ್ರೆ ಎಲೆಗಳು ಸಹಕಾರಿ. ದೇಹದ ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹ ಇದು ನೆರವಾಗುತ್ತದೆ. ಅಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ತೂಕ ಇಳಿಸುವ ಪ್ರಯತ್ನದಲ್ಲಿರುವವರಿಗೆ ಸಹ ಇದು ಸಹಾಯಕ.
ರಕ್ತಹೀನತೆ ನಿವಾರಣೆ
ಕಬ್ಬಿಣಾಂಶದಲ್ಲಿ ಸಮೃದ್ಧವಾಗಿರುವ ದೊಡ್ಡಪತ್ರೆ ಎಲೆಗಳನ್ನು ಸೇವಿಸುವುದು ರಕ್ತಹೀನತೆ ಸಮಸ್ಯೆಯನ್ನು ತಗ್ಗಿಸುತ್ತದೆ. ವಿಶೇಷವಾಗಿ ಕಬ್ಬಿಣದ ಕೊರತೆಯಿಂದ ಬಳಲುವವರಿಗೆ ಇದು ಸೂಕ್ತವಾದ ಆಯ್ಕೆ. ಮಹಿಳೆಯರಲ್ಲಿ ಮುಟ್ಟಿನ ನೋವನ್ನು ಕಡಿಮೆ ಮಾಡುವ ಗುಣವೂ ಈ ಎಲೆಗೆ ಇದೆ ಎಂದು ತಜ್ಞರು ಹೇಳುತ್ತಾರೆ.
ಬಾಯಿಯ ದುರ್ವಾಸನೆ ಮತ್ತು ಸೋಂಕುಗಳಿಗೆ ಪರಿಹಾರ
ದೊಡ್ಡಪತ್ರೆ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಬಾಯಿಯಲ್ಲಿರುವ ಸೋಂಕುಗಳನ್ನು ತಡೆಗಟ್ಟುತ್ತದೆ. ಹಲ್ಲುಕುಳಿಗಳು, ಬಾಯಿಯ ದುರ್ವಾಸನೆ ಹಾಗೂ ಇತರ ಬಾಯಿಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿ. ಎಲೆಗಳನ್ನು ಹಿಂದಿದೇ ತಿನ್ನುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ಪ್ರಮಾಣ ಕುಸಿಯುತ್ತದೆ.
ಚಯಾಪಚಯ ಕ್ರಿಯೆ ಬಲಪಡಿಸುತ್ತದೆ
ಮೊಣಕಾಲಿನ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ದೊಡ್ಡಪತ್ರೆ ಎಲೆಗಳ ಸೇವನೆ ಸಹಕಾರಿ. ಪ್ರತಿದಿನ ಎರಡು ಎಲೆಗಳನ್ನು ಸೇವಿಸುವುದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುತ್ತದೆ. ಜೇನುತುಪ್ಪ ಮತ್ತು ವಿನಿಗರ್ ಜೊತೆಗೆ ಎಲೆಗಳನ್ನು ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಮೂತ್ರಪಿಂಡದ ಕಲ್ಲು ಸಮಸ್ಯೆಗೆ ನೆರವು
ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ದೊಡ್ಡಪತ್ರೆ ಮೂತ್ರಪಿಂಡದ ಕಲ್ಲಿನ ಸಮಸ್ಯೆ ತಗ್ಗಿಸಲು ನೆರವಾಗುತ್ತದೆ. ದೇಹದಲ್ಲಿ ಉಂಟಾಗುವ ಸ್ವತಂತ್ರ ರಾಡಿಕಲ್‌ಗಳನ್ನು ನಿಯಂತ್ರಿಸುವ ಮೂಲಕ ದೇಹದ ಸಾಮಾನ್ಯ ಆರೋಗ್ಯವನ್ನು ಕಾಪಾಡುತ್ತದೆ.
ಪ್ರಕೃತಿಯ ಈ ಸರಳವಾದ, ಆದರೆ ಬಹು ಮಂದಿ ಕಡೆಗಣಿಸುವ ಸಸ್ಯವು ನಮ್ಮ ಆರೋಗ್ಯಕ್ಕೆ ಅಪಾರವಾದ ಪ್ರಯೋಜನಗಳನ್ನು ನೀಡಬಲ್ಲದು. ನಿಯಮಿತವಾಗಿ ಸೇವನೆಯಿಂದ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಇದಕ್ಕಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.






