ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ 58 ಕೋಟಿ ರೂ ಬಹುಮಾನ ಘೋಷಿಸಿದ BCCI!
ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶರ್ಮಾ ಪಡೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಟ್ಟಕ್ಕೇರಿದೆ. ಪಂದ್ಯಾವಳಿಯ ಆರಂಭದಿಂದಲೂ ಸೋಲಿಲ್ಲದೆ ಮುನ್ನುಗ್ಗಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಭಾರತವು ದೇಶದ ಇತಿಹಾಸದಲ್ಲಿ ಮೂರನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಪೈಕಿ ಒಂದು ಪ್ರಶಸ್ತಿಯನ್ನು ಮತ್ತೊಂದು ತಂಡದೊಂದಿಗೆ ಹಂಚಿಕೊಂಡಿದೆ.
ಇನ್ನೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಯಗಳಿಸಿದ ನಂತರ, ರೋಹಿತ್ ಶರ್ಮಾ ನೇತೃತ್ವದ ಭಾರತೀಯ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರ 58 ಕೋಟಿ ರೂಪಾಯಿಗಳ ಬೃಹತ್ ನಗದು ಬಹುಮಾನ ಘೋಷಿಸಿದೆ.
ಈ ಕುರಿತು ಬಿಸಿಸಿಐ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ನಾಯಕ ರೋಹಿತ್ ಶರ್ಮಾ ಅವರ ಸಮರ್ಥ ಮತ್ತು ಚಾಣಾಕ್ಷ ನಾಯಕತ್ವದಲ್ಲಿ, ಭಾರತವು ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿತು. ಫೈನಲ್‌ಗೆ ತಲುಪುವ ಹಾದಿಯಲ್ಲಿ ನಾಲ್ಕು ಅದ್ಭುತ ಗೆಲುವುಗಳನ್ನು ದಾಖಲಿಸಿತು.
ತಂಡವು ಬಾಂಗ್ಲಾದೇಶ ವಿರುದ್ಧ ಆರು ವಿಕೆಟ್‌ಗಳ ಘನ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತು, ನಂತರ ಪಾಕಿಸ್ತಾನ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಅವರು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೊದಲು ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಜಯದೊಂದಿಗೆ ತಮ್ಮ ಆವೇಗವನ್ನು ಮುಂದುವರಿಸಿದರು,” ಎಂದು ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.