ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಮದ್ಯರಾತ್ರಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ 23 ಮಂದಿ ಸೋಂಕಿತ ರೋಗಿಗಳ ಸಾವಿಗೆ ಸಂಬಂಧಪಟ್ಟಂತೆ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಕುರಿತಾಗಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದು ಮೂರು ದಿನಗಳ ಒಳಗಾಗಿ ತನಿಖಾ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಐಎಎಸ್ ಅಧಿಕಾರಿ ಶಿವಯೋಗಿ ಕಳಸದ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರ) ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಘಟನೆಯ ಕುರಿತಾಗಿ ತನಿಖಾ ವರದಿಯನ್ನು ಮೂರು ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ. ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯ ಒಳಗಾಗಿ ಕೋವಿಡ್ ಸೋಂಕಿಗೆ ತುತ್ತಾದ 23 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಘಟನೆಗೆ ಕಳವಳವನ್ನು ವ್ಯಕ್ತಪಡಿಸಿದ ಸರ್ಕಾರ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಸರ್ಕಾರ ವರದಿ ನೀಡುವಂತೆ ಸೂಚನೆ ನೀಡಿದೆ.
ಭಾನುವಾರ ರಾತ್ರಿ ನಡೆದ ಈ ಘಟನೆ ಇದೀಗ ರಾಷ್ಟ್ರಾದ್ಯಂತ ಸುದ್ದಿ ಯಾಗಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಈ ಘಟನೆಯ ಕುರಿತಾಗಿ ಟ್ವೀಟ್ ಮಾಡಿದ್ದು ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯದಿಂದ ಆಗಿರುವ ಕೊಲೆ ಎಂದು ಆರೋಪಿಸಿರುವ ಅವರು ಯಡಿಯೂರಪ್ಪ ಅವರು ಈ ಘಟನೆಯ ನೈತಿಕ ಹೊಣೆ ಹೊರುವರೇ ಎಂದು ಪ್ರಶ್ನಿಸಿದ್ದಾರೆ .
ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಜೊತೆಗೆ ಮಾತನಾಡಿ ಘಟನಾ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಈ ನಡುವೆ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಕೊರೋನಾ ರೋಗಿಗಳ ಸಾವನ್ನಪ್ಪಿರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿಷ್ಠೆ ಮಾಡಲು ಹೋಗಿ ಕೊರೋನಾ ರೋಗಿಗಳ ಸಾವಿಗೆ ರೋಹಿಣಿ ಸಿಂಧೂರಿ ಕಾರಣರಾದರಾ ಎಂದು ಆರೋಪಿಸಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಗೆ ಪ್ರತಿನಿತ್ಯ ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಮೂಲಕ ಆಮ್ಲಜನಕ ಪೂರೈಕೆಯಾಗುತಿತ್ತು. ಕಳೆದ ಶುಕ್ರವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಿಗೆ ಮೈಸೂರಿನಿಂದ ಆಮ್ಲಜನಕ ಪೂರೈಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸೂಚನೆ ನೀಡಿದ್ದರು. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಗೂ ಬೆಲೆಕೊಡದ ಮೈಸೂರು ಜಿಲ್ಲಾಧಿಕಾರಿ ಮೈಸೂರು ಹೊರತುಪಡಿಸಿ ಬೇರೆಡೆಗೆ ಆಮ್ಲಜನಕ ನೀಡಿದರೆ ಗ್ಯಾಸ್ ಏಜೆನ್ಸಿ ವಿರುದ್ಧ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ ಎನ್ನಲಅಗಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮಾತಿಗೆ ಹೆದರಿ ಗ್ಯಾಸ್ ಏಜೆನ್ಸಿಯವರು ಆಮ್ಲಜನಕ ನೀಡಲು ಹಿಂದೇಟು ಹಾಕಿದ್ದಾರೆ. ಭಾನುವಾರ ತಡ ರಾತ್ರಿ ವಿಷಯ ತಿಳಿದ ಸಂಸದ ಪ್ರತಾಪ್ ಸಿಂಹ, 50 ಜಂಬೂ ಸಿಲಿಂಡರ್ ಆಮ್ಲಜನಕವನ್ನು ಕಳುಹಿಸಿಕೊಟ್ಟಿದ್ದಾರೆ.