14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ( ಏಪ್ರಿಲ್ 21 ) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 220 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. 221 ರನ್‌ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೇಲಿನ ಕ್ರಮಾಂಕದ ಆಟಗಾರರು ಕಳಪೆ ಪ್ರದರ್ಶನ ನೀಡಿದರೂ ಸಹ ಮಧ್ಯಮ ಕ್ರಮಾಂಕದ ಆಟಗಾರರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಗೆಲುವಿನ ಸನಿಹಕ್ಕೆ ಬಂದಿತ್ತು. ತೀವ್ರ ಪೈಪೋಟಿ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 19.1 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ 18 ರನ್‌ಗಳಿಂದ ಸೋಲುಂಡಿತು.
ಈ ಪಂದ್ಯ ಮುಗಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟರ್ ಖಾತೆಯಿಂದ ಪಂದ್ಯದ ಕುರಿತು ಟ್ವೀಟ್ ಒಂದು ಬಂದಿದ್ದು, ಸದ್ಯ ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾಡಿರುವ ಈ ಟ್ವೀಟ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಚೆನ್ನೈ ತಂಡದ ಅಧಿಕೃತ ಟ್ವಿಟರ್ ಖಾತೆ ನಿರ್ವಹಿಸುತ್ತಿರುವವರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಆ ಟ್ವೀಟ್ ಚೆನ್ನೈ ಅಭಿಮಾನಿಗಳನ್ನು ಕೆರಳಿಸಲು ಕಾರಣ ಏನೆಂದರೆ ತಪ್ಪಾದ ಪದ ಬಳಕೆ. ಹೌದು ಚೆನ್ನೈ ಸೂಪರ್ ಕಿಂಗ್ಸ್ ಮಾಡಿರುವ ಆ ಟ್ವೀಟ್ ನಲ್ಲಿ ವೆಲ್ ಪ್ಲೇಯ್ಡ್ (ಚೆನ್ನಾಗಿ ಆಡಿದ್ದೀರಿ) ಎಂದು ಬಳಸುವ ಬದಲು ವೆಲ್ ಪೇಯ್ಡ್ (ಚೆನ್ನಾಗಿ ಪಾವತಿಸಿದ್ದೀರಿ) ಎಂದು ತಪ್ಪಾದ ಪದ ಬಳಸಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಫಿಕ್ಸಿಂಗ್ ಮಾಡಿಕೊಂಡು ಬ್ಯಾನ್ ಆಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಗಾಗ ತಂಡವನ್ನು ಕಾಲೆಳೆಯುತ್ತಿರುತ್ತಾರೆ, ಅಂಥದರಲ್ಲಿ ಚೆನ್ನೈ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿಯೇ ವೆಲ್ ಪೇಯ್ಡ್ ಎಂದು ಇತರ ತಂಡವನ್ನು ಉಲ್ಲೇಖಿಸಿ ಪ್ರಶಂಶಿಸಿದಾಗ ನೆಟ್ಟಿಗರು ಸುಮ್ಮನೆ ಇರುತ್ತಾರಾ? ಈ ಟ್ವೀಟ್ ಬಂದ ಬಳಿಕ ಮತ್ತೆ ಚೆನ್ನೈ ತಂಡವನ್ನು ಟೀಕಿಸಲಾರಂಭಿಸಿದ್ದಾರೆ. ಇನ್ನೊಂದೆಡೆ ಚೆನ್ನೈ ತಂಡದ ಅಭಿಮಾನಿಗಳು ತಪ್ಪಾದ ಟ್ವೀಟ್ ಕುರಿತು ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಟ್ವೀಟ್ ಅಭಿಮಾನಿಗಳಲ್ಲಿ ಮುಜುಗರವನ್ನುಂಟುಮಾಡಿರುವುದಂತೂ ನಿಜ.