ದೇಶ ಆಧುನಿಕತೆಯತ್ತ ಸಾಗುತ್ತಿದೆ. ಮಡಿವಂತಿಕೆ ಸಮಾಜದಿಂದ ನಾವೆಲ್ಲಾ ಹೊರಬರುತ್ತಿದ್ದೇವೆ. ಸಮಾನತೆಯ ಮಂತ್ರ ಫಲಿಸಿದೆ ಎಂದು ಭ್ರಮೆಯಲ್ಲಿದ್ದೇವೆ! ಆದರೆ, ಇಂದಿಗೂ ನಮ್ಮಲ್ಲಿನ ಅನಿಷ್ಠ ಪದ್ಧತಿಗಳು ಹಾಗೇ ಇವೆ.
ಮಾಜಿ ಪ್ರಧಾನಿ ದೇವೇಗೌಡರ ತವರು ಹಾಸನ ಜಿಲ್ಲೆಯಲ್ಲಿ ಜೀತಪದ್ದತಿ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹೋಗಿ ನಾಲ್ವರು ಮಕ್ಕಳು, ನಾಲ್ವರು ಮಹಿಳೆಯರು ಹಾಗೂ 8 ಮಂದಿ ಪುರುಷರನ್ನು ರಕ್ಷಿಸಿದ್ದಾರೆ.

ಹೊಳೆನರಸೀಪುರದಲ್ಲಿ ಮಾನವ ಕಳ್ಳ ಸಾಗಣೆ ಪ್ರಕರಣ ಬಯಲಿಗೆ ಬಂದಿದೆ, ಬಾಲಕಾರ್ಮಿಕರು ಸೇರಿದಂತೆ 16 ಮಂದಿ ಅಮಾಯಕರನ್ನು ರಕ್ಷಿಸಲಾಗಿದೆ. ಮುಂಡನಹಳ್ಳಿಯ ಸೋಮಶೇಖರ್ ಎಂಬುವವರ ಜಮೀನಿನಲ್ಲಿ ಜೀತಪದ್ಧತಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಬ್ಬಿನ ಗದ್ದೆಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದ ಸೋಮಶೇಖರ್ ಅತೀ ಕಡಿಮೆ ಹಣ ನೀಡಿ ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಶೇಖರ್ ಮತ್ತು ಬದ್ಯಾನಾಯಕ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.






