ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರೆಯ ಸಂಭ್ರಮ ಕಳೆಗಟ್ಟುತ್ತಿದೆ. ಅರಮನೆ ನಗರಿಯಲ್ಲಿ ಈಗಾಗಲೇ ನಾಡಹಬ್ಬದ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಸೋಮವಾರ ಫಿರಂಗಿ ಗಾಡಿಗಳಿಗೆ ಪೂಜೆ ಜೊತೆಗೆ ಗಜಪಡೆಗೆ ಮರಳಿನ ಮೂಟೆ ತಾಲೀಮು ನೀಡಲಾಯಿತು.
ಅರಮನೆಯ ಆನೆ ಬಾಗಿಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಬೂಸವಾರಿ ಆನೆಗಳಿಗೆ ಮತ್ತು ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಪೂರ್ವಾಭ್ಯಾಸಕ್ಕೆ ಚಾಲನೆ ನೀಡಲಾಯಿತು. ಪೂಜೆ ಸಂದರ್ಭದಲ್ಲಿ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ ಯಾವುದೇ ವಿಘ್ನಗಳು ಎದುರಾಗದೆ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ದಸರೆಯ ಪ್ರಮುಖ ಆಕರ್ಷಣೆಯಾಗಿರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ದಿನದಂದು ಮೆರವಣಿಗೆ ಆರಂಭಕ್ಕೆ ಮುನ್ನ 21 ಬಾರಿ ಕುಶಾಲತೋಪುಗಳನ್ನು ಸಿಡಿಸಲಾಗುತ್ತದೆ. ಮೈಸೂರಿನ ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಇದನ್ನು ನೆರವೇರಿಸಲಿದ್ದಾರೆ.