ಬೆಂಗಳೂರು:ಸ್ಪೀಕರ್ ಸ್ಥಾನವನ್ನು ಮುಂದಿಟ್ಟುಕೊಂಡು ಅವರು ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಿದ್ದಾರೆ, ಇದನ್ನು ಕಾಂಗ್ರೆಸ್‌ನವರು ಸಮರ್ಥಿಸುತ್ತಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದು ದ್ವೇಷ ಪ್ರಕಟಿಸಿದ ಜಮೀರ್ ಅಹಮದ್ ಖಾನ್ ಅವರನ್ನು ವಜಾಗೊಳಿಸಬೇಕು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದರು. ಜಮೀರ್ ಅಹಮದ್ ಖಾನ್ ಪ್ರಶ್ನೆಗೆ ಉತ್ತರ ನೀಡಲು ನಿಂತಾಗ ಆಕ್ಷೇಪಿಸಿದರು. ಬಿಜೆಪಿ ಗದ್ದಲದಿಂದಾಗಿ ಸ್ಪೀಕರ್ ಖಾದರ್ ಅವರು ಸಂಧಾನ ಸಭೆ ನಡೆಸಿದರೂ ಫಲ ದೊರೆಯಲಿಲ್ಲ. ಬಳಿಕವೂ ಪ್ರತಿಭಟನೆ, ಗದ್ದಲ ಮುಂದುವರಿದಿತ್ತು. ಅದರ ನಡುವೆಯೇ ಸದನದ ಕಲಾಪ, ವಿಧೇಯಕಗಳ ಮಂಡನೆ ನಡೆದಿದೆ.
ಈ ನಡುವೆ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಅದರಲ್ಲಿ ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ ಎಂದು ಹೇಳಿದರು.