ಜೀವನಾಂಶ ಕೇಳದೇ ವಿಚ್ಛೇದನ ಪಡೆದ ‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ!
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಅವರ ವೈವಾಹಿಕ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ. ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಇದೀಗ ಮುದ್ರೆ ಬಿದ್ದಿದ್ದು, ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಹಾಗೂ ಉದ್ಯಮಿ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ ಮಂಜೂರು ಮಾಡಿದೆ.
ಹನ್ಸಿಕಾ ಮತ್ತು ಸೊಹೈಲ್ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಹನ್ಸಿಕಾ ಅವರು ಪತಿಯಿಂದ ಯಾವುದೇ ರೀತಿಯ ಜೀವನಾಂಶವನ್ನು ಕೇಳಿಲ್ಲ.
ನ್ಯಾಯಾಲಯದಲ್ಲಿ ಹನ್ಸಿಕಾ ಪರವಾಗಿ ವಕೀಲ ಅದ್ನಾನ್ ಶೇಖ್ ವಾದ ಮಂಡಿಸಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದವು. ಜೀವನಶೈಲಿ, ಆಲೋಚನೆ ಹಾಗೂ ಸ್ವಭಾವಗಳಲ್ಲಿ ಇರುವ ವ್ಯತ್ಯಾಸಗಳು ಪದೇ ಪದೇ ಜಗಳಕ್ಕೆ ಕಾರಣವಾಗುತ್ತಿದ್ದವು ಎಂದು ತಿಳಿಸಲಾಗಿದೆ.
ಇಬ್ಬರ ನಡುವಿನ ಮನಸ್ತಾಪವನ್ನು ಸರಿಪಡಿಸಲು ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಹಲವು ಬಾರಿ ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಅಂತಿಮವಾಗಿ 2024ರ ಜುಲೈ 2ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇದೀಗ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ.
ಹನ್ಸಿಕಾ ಮತ್ತು ಸೊಹೈಲ್ 2022ರ ಡಿಸೆಂಬರ್ 4ರಂದು ಜೈಪುರನ ಅರಮನೆಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಮದುವೆಗೆ ಮುನ್ನ ನಡೆದ ಮೆಹಂದಿ, ಸಂಗೀತ್ ಮತ್ತು ಹಳದಿ ಸಮಾರಂಭಗಳು ಸಾಕಷ್ಟು ಸುದ್ದಿಯಾಗಿದ್ದವು. ಇವರ ಪ್ರೇಮಕಥೆ ಹಾಗೂ ಮದುವೆ ಸಿದ್ಧತೆಗಳನ್ನು ಹನ್ಸಿಕಾಸ್ ಲವ್ ಶಾದಿ ಡ್ರಾಮಾ’ ಎಂಬ ರಿಯಾಲಿಟಿ ಶೋ ಮೂಲಕ ಪ್ರಸಾರ ಮಾಡಲಾಗಿತ್ತು.
34 ವರ್ಷದ ಹನ್ಸಿಕಾ ಮೋಟ್ವಾನಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ಬಿಂದಾಸ್’ ಆಗಿದ್ದು, ಅದರಲ್ಲಿ ಅವರು ಪುನೀತ್ ರಾಜ್ಕುಮಾರ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದರು.






