ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಹೀನಾಯ ಪರಾಭವದ ಬಳಿಕ ದೋಸ್ತಿ ಸರ್ಕಾರದ ಕಾರ್ಯವೈಖರಿ ಕುರಿತು ಆಡಳಿತ ಪಕ್ಷದ ಶಾಸಕರುಗಳು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ. ಪ್ರತಿಪಕ್ಷ ಬಿಜೆಪಿ ಎಲ್ಲಿ ಇದರ ಲಾಭ ಪಡೆದು ಸರ್ಕಾರ ಪತನಗೊಳಿಸಲು ಯತ್ನಿಸುತ್ತದೋ ಎಂಬ ಆತಂಕದಲ್ಲಿರುವ ದೋಸ್ತಿ ನಾಯಕರು ಶಾಸಕರುಗಳ ಮನವೊಲಿಕೆಗೆ ಮುಂದಾಗಿದ್ದಾರೆ.

ಅತೃಪ್ತ ಶಾಸಕರುಗಳ ನೇತೃತ್ವ ವಹಿಸಿರುವ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರ ಮನವೊಲಿಕೆಗೆ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಅಖಾಡಕ್ಕಿಳಿದಿದ್ದು, ರಮೇಶ್ ಜಾರಕಿಹೊಳಿ ಆಪ್ತ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರ ಮೂಲಕ ಸಂಧಾನ ಪ್ರಕ್ರಿಯೆ ನಡೆಸಲಾಗುತ್ತಿದೆ.

ಇದರ ಜೊತೆಗೆ ಪಕ್ಷೇತರ ಶಾಸಕರುಗಳಾದ ಆರ್. ಶಂಕರ್ ಹಾಗೂ ನಾಗೇಶ್ ಅವರುಗಳನ್ನು ಸೆಳೆಯಲು ಮುಂದಾಗಿದ್ದು, ಈ ಇಬ್ಬರಿಗೆ ಜೆಡಿಎಸ್ ಪಾಲಿನ ಖಾಲಿ ಉಳಿದಿರುವ 2 ಸಚಿವ ಸ್ಥಾನಗಳನ್ನು ನೀಡಲು ಸಿದ್ಧತೆ ನಡೆದಿದೆ.

ಮಂಗಳವಾರದಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ಅಗತ್ಯ ಬಿದ್ದರೆ ತಾವು ಸಚಿವ ಸ್ಥಾನ ತೊರೆಯಲು ಸಿದ್ಧ ಎಂದು ಕೆಲವರು ಭರವಸೆ ನೀಡಿದ್ದಾರೆಂದು ಹೇಳಲಾಗಿದೆ.






