ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK
ಬೆಂಗಳೂರು: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್. ದುಡ್ಡು ಹೊಡೆಯುವುದಕ್ಕೆ ಮಾಡಿರುವ ಸುಲಿಗೆ ಕಾರ್ಯಕ್ರಮ ಇದಾಗಿದೆ.
ಯಾರೂ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಹಣ ಕಟ್ಟಬೇಡಿ. ಎರಡು ವರ್ಷಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಡಿಮೆ ದರದಲ್ಲಿ ನಿಮಗೆ ಖಾತೆ ಮಾಡಿಕೊಡುತ್ತೇವೆ. ಈ ಸರ್ಕಾರದ ಬೋಗಸ್ ಆಮಿಷಕ್ಕೆ ಮರುಳಾಗಬೇಡಿ. ಇದು ನಾನು ಬೆಂಗಳೂರು ಜನತೆಗೆ ನೀಡುತ್ತಿರುವ ಮುಕ್ತ ಕರೆ..
ಬಿ ಖಾತಾವನ್ನು ಬಿ ಖಾತೆಗೆ ಪರಿವರ್ತನೆ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರಕಾರ ರೂಪಿಸಿರುವ ಕಾರ್ಯಕ್ರಮದ ಕುರಿತು ಕೇಂದ್ರ ಸರಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ ಮಾತುಗಳಿವು.
ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ಬೆಂಗಳೂರು ಜನರಿಗೆ ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ. ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ. ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು ಎಂದು ಬೆಂಗಳೂರು ಜನತೆಗೆ ಕರೆ ನೀಡಿದರು ಕೇಂದ್ರ ಸಚಿವರು.
ಜನತೆ ಆತಂಕಕ್ಕೆ ಒಳಗಾಗಬೇಕಿಲ್ಲ. ಎರಡು ವರ್ಷ ಆದ ಮೇಲೆ ನಮ್ಮ ಮೈತ್ರಿ ಸರ್ಕಾರ ಬರುತ್ತದೆ. ಆಗ ಅತ್ಯಂತ ಸರಳವಾಗಿ, ಸುಲಭವಾಗಿ ಖಾತೆ ಮಾಡಿಕೊಡುತ್ತೇವೆ. ನಿಮಗೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ. ಈಗಾಗಲೇ ಆಸ್ತಿ ಸಂಪಾದನೆ ಮಾಡಲು ಸಾಲ ಮಾಡಿ ಬಡ್ಡಿ ಕಟ್ಟುತ್ತಿದ್ದೀರಿ. ಈಗ ಮತ್ತೊಮ್ಮೆ ಈ ಎ ಖಾತಾ ಮಾಡಿಸಲು ಲಕ್ಷಾಂತರ ರೂಪಾಯಿ ಸಾಲ ಮಾಡಬೇಡಿ. ಇನ್ನೊಮ್ಮೆ ಸಾಲದ ಸುಳಿಗೆ ಸಿಕ್ಕಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಅವರು ಜನರನ್ನು ಕೋರಿದರು.
ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಿಂದ ಜನತೆ ಬಸವಳಿಸಿದ್ದಾರೆ. ಇಂಥ ಹೊತ್ತಿನಲ್ಲಿ ದೀಪಾವಳಿ ಕೊಡುಗೆ ಎಂದು ಪುಟಗಟ್ಟಲೆ ಜಾಹೀರಾತು ಕೊಟ್ಟುಕೊಂಡು ಬಂದ ಈ ಸರ್ಕಾರ ಎ ಖಾತಾ ಎನ್ನುವ ದೋಖಾ ಕಾರ್ಯಕ್ರಮವನ್ನು 6ನೇ ಗ್ಯಾರಂಟಿಯನ್ನ ಜನರಿಗೆ ದೀಪಾವಳಿ ಉಡುಗೊರೆ ಕೊಟ್ಡಿದ್ದೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ದೀಪಾವಳಿ ಕೊಡುಗೆ ಎಂದರೆ ಜನರಿಂದ ಲಕ್ಷ ಲಕ್ಷ ಪೀಕುವುದೇ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಬೋಗಸ್ ಕಾರ್ಯಕ್ರಮದ ಬಗ್ಗೆ ಈ ಸರ್ಕಾರ ನಿತ್ಯ ಜಾಹಿರಾತು ನೀಡುತ್ತಿದೆ. 15 ದಿನಗಳಿಂದ ಜಾಹಿರಾತು ಕೊಡುತ್ತಿದೆ. ಇದು ನಾಡಿನ ಜನರಿಗೆ ಟೋಪಿ ಹಾಕುವ ಕೆಲಸ. ಖಾತಾ ಪರಿವರ್ತನೆ ಮಾಡಲಿ, ಬೇಡ ಎಂದವರು ಯಾರು? ಆದರೆ, ಲಕ್ಷ ಲಕ್ಷ ಸುಲಿಗೆ ಯಾಕೆ? ಎಂದು ಅವರು ಪ್ರಶ್ನಿಸಿದರು.






