ಜೈ ಶ್ರೀರಾಮ್ ಎಂದು ಹೇಳದ್ದಕ್ಕೇ ಕೆರಳಿದ ಗುಂಪೊಂದು ಮದರಸಾ ಶಿಕ್ಷಕನನ್ನು ಮನ ಬಂದಂತೆ ಥಳಿದು ಚಲಿಸುತ್ತಿದ್ದ ರೈಲಿನಿಂದಲೇ ಹೊರದಬ್ಬಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗುಂಪೊಂದು ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದೆ. ಇದನ್ನು ನಿರಾಕರಿಸಿದ್ದಕ್ಕೆ ಆತನಿಗೆ ಮನಸೋ ಇಚ್ಚೆ ಹೊಡೆದು ಚಲಿಸುತ್ತಿದ್ದ ರೈಲಿನಿಂದ ಪಾರ್ಕ್ ಸರ್ಕಸ್ ಸ್ಟೇಷನ್ ಸಮೀಪ ಹೊರದಬ್ಬಿದೆ ಎಂದು ಸಂತ್ರಸ್ತ ದೂರಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದು, ಸಂತ್ರಸ್ತನಿಗೆ ಮುಖ ಮತ್ತು ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಕುರಿತಂತೆ ಬಲ್ಲಿಗುಂಜ್ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪರಗಣ ಜಿಲ್ಲೆಯಲ್ಲಿ ಮದರಸಾ ಶಿಕ್ಷಕರಾಗಿರುವ ಹಫೀಜ್ ಮೊಹಮ್ಮದ್ ಶಾರುಕ್ ಹಲ್ದಾರ್ ಎನ್ನುವ 26 ವರ್ಷದ ಮುಸ್ಲಿಂ ವ್ಯಕ್ತಿ ದೌರ್ಜನ್ಯಕ್ಕೆ ಒಳಗಾದವರು. ಅವರು ಕನ್ನಿಂಗ್‌ನಿಂದ ಹೂಗ್ಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಸಂದರ್ಭದಲ್ಲಿ ನಾಲ್ಕೈದು ಜನರ ಗುಂಪು ಶಿಕ್ಷಕನಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಅವರನ್ನು ಥಳಿಸಿ ರೈಲಿನಿಂದ ಹೊರದಬ್ಬಿದ್ದಾರೆ.
ಜಾರ್ಖಂಡ್ ನಲ್ಲಿ 22 ವರ್ಷದ ಯುವಕ ತಬ್ರೆಜ್ ಅನ್ಸಾರಿ ಅನ್ನೋರನ್ನು ಯುವಕರ ಗುಂಪು ಒತ್ತಾಯಪೂರ್ವಕವಾಗಿ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಎಂದು ಹೇಳುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಆತ ಮೃತಪಟ್ಟ ನಂತರ ಪಶ್ಚಿಮ ಬಂಗಾಳದ ಈ ಪ್ರಕರಣ ಬೆಳಕಿಗೆ ಬಂದಿದೆ.