ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಹರಿಯುತ್ತಿದ್ದರೂ, ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ವಾರಾಂತ್ಯದಲ್ಲೂ ಸೀಮಿತ ಪ್ರವಾಸಿಗರಿಗೆ ಮಾತ್ರ ಜಲಧಾರೆ ಕಣ್ತುಂಬಿಕೊಳ್ಳುವ, ಅದರ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಈ ಬಾರಿಯೂ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಕೋವಿಡ್ ಭಾರೀ ಪೆಟ್ಟು ಕೊಟ್ಟಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಜೋಗ ಜಲಾಪಾತ ಮೈದುಂಬಿಕೊಂಡಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಭೋರ್ಗರೆಯುತ್ತ ಧುಮ್ಮಿಕ್ಕುತ್ತಿವೆ. ಪ್ರತಿ ವರ್ಷ ಜೋಗವನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳು, ಹೊರ ರಾಜ್ಯ, ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆ ಜೋಗಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಇದೆ ಕಾರಣಕ್ಕೆ ಬಹುತೇಕ ಪ್ರವಾಸಿಗರಿಗೆ ಜಲಪಾತದ ದರ್ಶನವಾಗದೆ ಹಿಂತಿರುಗುತ್ತಿದ್ದಾರೆ.
ಜೋಗ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ 72 ಗಂಟೆಗಳ ಒಳಗಾಗಿ ಮಾಡಿಸಿದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ/ ಆರ್‍ಎಟಿ ನೆಗೆಟಿವ್ ವರದಿ/ ಕೋವಿಡ್ 2ನೇ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಮಳೆ ಮತ್ತು ಚಳಿಗಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭಾರಿ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದರು. ಇದರಿಂದ ಜಿಲ್ಲೆಯಲ್ಲಿ ವ್ಯಾಪಾರ, ವಾಹಿವಾಟಿಗೆ ಅನುಕೂಲವಾಗುತಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಇವೆಲ್ಲಕ್ಕೂ ಅಡ್ಡಿಯುಂಟಾಗಿದೆ. ಜೋಗ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಕುಸಿದಿದ್ದು, ಈ ಭಾಗದ ಹೊಟೇಲ್, ರೆಸಾರ್ಟ್, ಲಾಡ್ಜ್‌ಗಳು ಬಣಗುಡುವಂತಾಗಿದೆ. ಅಲ್ಲದೆ ಸ್ಥಳೀಯರ ವ್ಯಾಪಾರ ವಹಿವಾಟಿಗೂ ಪೆಟ್ಟು ಬಿದ್ದಿದೆ.