ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ತಾನು ಕೂಡ ಶ್ರೀ ಸಾಮಾನ್ಯ ಸಿಎಂ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ವಿಶ್ವ ಅಂಗಾಂಗ ದಿನಾಚರಣೆ ಅಂಗವಾಗಿ ತನ್ನ ದೇಹವನ್ನು ದಾನ ಮಾಡುವ ಮೂಲಕ ತಾನೊಬ್ಬ ಸರಳ ಸಿಎಂ ಎಂಬುದಕ್ಕೆ ನಿನ್ನೆಯಷ್ಟೇ ಬೊಮ್ಮಾಯಿ ನಾಂದಿ ಹಾಡಿದ್ದರು. ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹಾದಿ ತುಳಿದಿರುವ ಬೊಮ್ಮಾಯಿ ನನಗೂ ಸಹ ಝೀರೋ ಟ್ರಾಫಿಕ್ ಬೇಡ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ಬೇಡ ಎಂದು ನಿರಾಕರಿಸಿರುವ ಬಸವರಾಜ ಬೊಮ್ಮಾಯಿ ಅವರು, ತಮ್ಮ ಸಂಚಾರದ ವೇಳೆ ಸಿಗ್ನಲ್ ಮಾತ್ರ ಫ್ರೀ ಮಾಡಿಕೊಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಒಂದು ವೇಳೆ ತಾನು ಸಂಚರಿಸುವ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಬಂದಲ್ಲಿ, ಮೊದಲು ಆಂಬ್ಯುಲೆನ್ಸ್ ಸಂಚಾರಕ್ಕೆ ದಾರಿ ಮಾಡಿಕೊಡಬೇಕು ಎಂದು ಸೂಚನೆ ನೀಡಿದ ಬೆನ್ನಲ್ಲೇ ಸಂಚಾರ ನಿಯಂತ್ರಣ ಕೊಠಡಿಯಲ್ಲಿ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದೆ.