ಆಧುನಿಕ ಯುಗದ ಅತ್ಯಂತ ಪ್ರಭಾವಿ ಕ್ರಿಕೆಟಿಗ, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಬಾರಿಸಿ ಗೆಲುವಿನ ಸೂತ್ರಧಾರ ಎನಿಸಿಕೊಳ್ಳುವ ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅವರು ಈ ಘೋಷಣೆಯನ್ನು ಮಾಡಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಅವರು ಇದು ನನ್ನ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕೊನೇ ಟಿ20 ವಿಶ್ವ ಕಪ್ ಎಂದು ಹೇಳಿದರು. ಈ ಮೂಲಕ ಅವರು ದೀರ್ಘ ಕಾಲದ ಟಿ20 ಅಂತಾರಾಷ್ಟ್ರೀಯ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.
ವಿರಾಟ್ ಕೊಹ್ಲಿ ಕೇವಲ ಟಿ20 ಮಾತ್ರ ಎಂದು ಹೇಳಿರುವ ಕಾರಣ ಅವರು ಏಕ ದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಆಡಲಿದ್ದಾರೆ. ಅದೇ ರೀತಿ ಅವರು ಅತಿ ಹೆಚ್ಚು ಆರಾಧಿಸಲ್ಪಡುವ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತಮ್ಮ ಸೇವೆ ಮುಂದುವರಿಸಲಿದ್ದಾರೆ.