ಈ ವರ್ಷಾಂತ್ಯದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಲು ಯುವ ತಾರೆಗಳಾದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶಾನ್‌ಗೆ ಎಲ್ಲಾ ರೀತಿಯ ಅರ್ಹತೆ ಇದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಂಬೈ ಮೂಲದ ಸೂರ್ಯಕುಮಾರ್ ಯಾದವ್ ಹಾಗೂ ಜಾರ್ಖಂಡ್ ಮೂಲದ ಇಶಾನ್ ಕಿಶಾನ್ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಜತೆಗೆ ಈ ಇಬ್ಬರೂ ಕೂಡ ಪದಾರ್ಪಣೆ ಇನಿಂಗ್ಸ್‌ಗಳಲ್ಲಿ ಚೊಚ್ಚಲ ಅರ್ಧಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಇಶಾನ್ ಕಿಶಾನ್ ಚೊಚ್ಚಲ ಅರ್ಧಶತಕ ಸಿಡಿಸಿದ್ದರು. ಆದರೆ, ಪದಾರ್ಪಣೆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಸೂರ್ಯಕುಮಾರ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ತಮ್ಮ ಆಕ್ರಮಣಕಾರಿ ಇನಿಂಗ್ಸ್‌ಗಳಿಂದ ಈ ಇಬ್ಬರೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ.
ರಾಯಿಟರ್ಸ್ ಜತೆ ಫೋನ್‌ನಲ್ಲಿ ನಡೆದಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಸಚಿನ್ ತೆಂಡೂಲ್ಕರ್, ಯುವ ಪ್ರತಿಭೆಗಳಾದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶಾನ್ ಪ್ರದರ್ಶನವನ್ನು ಗುಣಗಾನ ಮಾಡಿದರು.
“ಈ ಇಬ್ಬರೂ ಆಟಗಾರರು ಎಷ್ಟು ಪ್ರತಿಭಾವಂತರಾಗಿದ್ದಾರೆಂಬ ಬಗ್ಗೆ ಯಾವುದೇ ಅನುಮಾನವಿಲ್ಲ. ಈ ಇಬ್ಬರೂ ಅಂತಾರಾಷ್ಟ್ರೀಯ ಪದಾರ್ಪಣೆ ಇನಿಂಗ್ಸ್‌ಗಳಲ್ಲಿ ಆಯ್ಕೆದಾರರಿಗೆ ತಲೆ ಬಿಸಿ ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ವಿದೇಶಿ ತಂಡಗಳ ಮುಂಚೂಣಿ ಬೌಲರ್‌ಗಳಿಗೆ ಈ ಇಬ್ಬರೂ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಹಾಗಾಗಿ, ಸೂರ್ಯ ಹಾಗೂ ಇಶಾನ್ ಟಿ20 ವಿಶ್ವಕಪ್ ಆಡಲು ಸಿದ್ದರಿದ್ದಾರೆ,” ಎಂದು ಹೇಳಿದರು.
ಸೂರ್ಯಕುಮಾರ್ ಯಾದವ್ ಅಸಾಧಾರಣ ಆಟಗಾರ ಹಾಗೂ ಕಳೆದ ವರ್ಷದಿಂದ ಇಶಾನ್ ಕಿಶಾನ್ ಅವರ ಪ್ರಕ್ರಿಯೆ ಅದ್ಭುತವಾಗಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದರು.
“ಅವರಿಬ್ಬರೂ ಅತ್ಯುತ್ತಮ ಆಟಗಾರರು. ಸೂರ್ಯ ಜೊತೆ ನಾನು ತುಂಬಾ ಸಮಯವನ್ನು ಕಳೆದಿದ್ದೇನೆ. ಅವರು ಆಟವನ್ನು ನೋಡುತ್ತಿದ್ದರೆ, ಅದ್ಭುತವಾಗಿ ಕಾಣುತ್ತಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಇಶಾನ್ ಕಿಶಾನ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಅವರ ಬ್ಯಾಟ್ ಸ್ವಿಂಗ್ ಕೂಡ ಪರಿಣಾಮಕಾರಿಯಾಗಿದೆ,” ಎಂದು ಸಚಿನ್ ತೆಂಡೂಲ್ಕರ್ ಹೇಳಿದರು.