ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಕೆರಬಿಯನ್ನರ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ. ಇಂದಿನಿಂದ ಟಿ20 ಆರಂಭವಾಗುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ತರುವಾಯ ಟೀಮ್ ಇಂಡಿಯಾದ ಹಾಲಿ ಕೋಚ್ ರವಿಶಾಸ್ತ್ರಿ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾಕ್ಕೆ ಹೊಸ ಕೋಚನ್ನು ಆಯ್ಕೆ ಮಾಡಲು ಬಿಸಿಸಿಐ ಹುಡಕಾಟ ನಡೆಸುತ್ತಿದೆ. ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಇದುವರೆಗೆ 2000 ಅರ್ಜಿಗಳು ಬಂದಿವೆ ಎನ್ನಲಾಗಿದೆ.
ಕೋಚ್ ಹುದ್ದೆಗೆ ಏರುವ ಬಗ್ಗೆ ಬಂಗಾಳದ ಹುಲಿ, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ಕ್ರಿಕೆಟಿಗ. ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಕೋಚ್ ಆಗುವ ಆಸೆಯನ್ನು ದಾದಾ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಕೋಚ್ ಹುದ್ದೆ ಹೊಣೆ ಹೊರಲು ನನಗೆ ಖಂಡಿತವಾಗಿಯೂ ತುಂಬಾ ಆಸಕ್ತಿ ಇದೆ. ಆದ್ರೆ ಈಗ ಕೋಚ್ ಆಗಲಾರೆ. ಒಂದು ಹಂತ ಮುಗಿಯಲಿ. ಸದ್ಯಕ್ಕೆ ನಾನು ಐಪಿಎಲ್ನಲ್ಲಿ ದೆಹಲಿ ಕ್ಯಾಪಿಟಲ್ಸ್ ನ ಕೋಚ್ ಆಗಿದ್ದೇನೆ ಹಾಗೂ ಟಿವಿ ಕಾಮೆಂಟ್ರಿಗಳಲ್ಲಿ ಭಾಗಿಯಾಗುತ್ತಿದ್ದೇನೆ. ಇವುಗಳ ಜವಬ್ದಾರಿ ಮುಗಿಸುತ್ತೇನೆ. ಆ ನಂತರ ಕೋಚ್ ಹುದ್ದೆಗೇರಲು ನಾನೇ ಮುಂದೆ ಬರುತ್ತೇನೆ ಎಂದಿದ್ದಾರೆ.
ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಪ್ರಬಲ ತಂಡವಾಗಿ ಬೆಳೆಯಿತು. ಟೀಮ್ ಇಂಡಿಯಾಕ್ಕೆ ಹೊಸತನವನ್ನು ಸೌರವ್ ಕೊಟ್ಟರು. ಅನೇಕ ಪ್ರತಿಭೆಗಳಿಗೆ ಅವಕಾಶ ಸಿಕ್ಕಿತ್ತು. 2003ರ ವಿಶ್ವಕಪ್ ನಲ್ಲಿ ಸೌರವ್ ನಾಯಕತ್ವದಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು.