ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮಲ್ಲಿ ಹೀಗೆಲ್ಲಾ ಆಗಿತ್ತಾ? ಅಬ್ಬಾ.. ಏನ್ರೀ ಇದು…!
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಅದು ಸಂತಸ, ಕಿರಿಕ್, ಹಾಸ್ಯ, ಮುನಿಸು, ಫ್ರೆಂಡ್ಶಿಪ್ ಎಲ್ಲಾ ರೀತಿಯ ಕ್ಷಣಗಳಿಗೆ ಕಾರಣವಾಗಿದೆ. ಅದರಲ್ಲೂ ಪ್ರಮುಖ ಘಟನೆಗಳು ಮಾತ್ರ ಸದಾ ಕಾಲಕ್ಕೆ ನೆನಪಿನಲ್ಲುಳಿಯುತ್ತವೆ. ಅಂತಹ ಡ್ರೇಸ್ಸಿಂಗ್ ರೂಮ್ ಸೀಕ್ರೇಟ್ಸ್ ಇಲ್ಲಿವೆ ನೋಡಿ.
ಟಾರ್ಗೆಟ್ ಧೋನಿ
ಮಹೇಂದ್ರ ಸಿಂಗ್ ಧೋನಿಯನ್ನು ಆರಂಭದ ದಿನಗಳಲ್ಲಿ ಹೆಚ್ಚಾಗಿ ಆಡಿಕೊಳ್ಳುತ್ತಿದ್ದರು. ಅದರಲ್ಲೂ ಧೋನಿಗೆ ಬಿಹಾರಿ ಎಂದು ಹೆಚ್ಚಾಗಿ ಕರೆಯುತ್ತಿದ್ದರು. ಆದರೆ ಧೋನಿ ಮಾತ್ರ ಶಾಂತ ಸ್ವಭಾವದಿಂದ ಅದೆಲ್ಲವನ್ನು ಸ್ವೀಕರಿಸುತ್ತಿದ್ದರು. ಆದರೆ ಯುವರಾಜ್ ಸಿಂಗ್ ಮಾತ್ರ ಧೋನಿಯ ಉತ್ತಮ ಗೆಳೆಯನಾಗಿದ್ದರು. ಆದರೆ ಕಾಲಾಂತರದಲ್ಲಿ ಯುವಿಯನ್ನೇ ಧೋನಿ ಟೀಂ ಇಂಡಿಯಾದಿಂದ ಹೊರ ದೂಡಿದ ಎಂದು ಯುವಿ ತಂದೆ ಆರೋಪಿಸಿದ್ದು ಮಾತ್ರ ವಿಪರ್ಯಾಸ.
ಸೆಹ್ವಾಗ್ ಕಾಲರ್ ಹಿಡಿದಿದ್ದ ಕೋಚ್..!
ಅದು 2002ರಲ್ಲಿ ಇಂಗ್ಲೇಂಡ್ ವಿರುದ್ದ ನಡೆದ ನಾಟ್ವೆಸ್ಟ್ ಸರಣಿಯಲ್ಲಿ ನಡೆದ ಘಟನೆ. ವಿರೇಂದ್ರ ಸೆಹ್ವಾಗ್ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಆಡಲು ಹೋಗಿ ಔಟಾಗಿ ಪೆವಿಲಿಯನ್ನತ್ತ ಮುಖಮಾಡಿದ್ದರು. ಅದನ್ನು ಗಮನಿಸಿ ಕೋಪಗೊಂಡಿದ್ದ ಕೋಚ್ ಜಾನ್ ರೈಟ್ರವರು ಸೆಹ್ವಾಗ್ ಕತ್ತಿನ ಪಟ್ಟಿ ಹಿಡಿದು ಆ ರೀತಿಯ ಶಾಟ್ ಹೊಡೆಯುವುದಾ ಎಂದು ಗದರಿದ್ದರು. ಆದರೆ ಸೆಹ್ವಾಗ್ ಮಾತ್ರ ಯಾವುದೇ ಮಾತನಾಡಿರಲಿಲ್ಲ.
ಹಾರ್ಟ್ ಅಟ್ಯಾಕ್ ನಿಂದ ಪಾರಾಗಿದ್ದ ಯುವಿ..!
ಅದು ಯುವರಾಜ್ ಸಿಂಗ್ ಗೆ ಡೆಬ್ಯೂ ಮ್ಯಾಚ್. ಮೊದಲೇ ಭಯದಲ್ಲಿದ್ದ ಯುವಿಗೆ `ನೀನು ನಾಳೆ ನನ್ನ ಜೊತೆ ಇನ್ನಿಂಗ್ಸ್ ಓಪನಿಂಗ್ ಮಾಡುತ್ತಿಯಾ..? ಅದಕ್ಕೆ ರೆಡಿಯಾಗಿರು’ ಅಂತ ನಾಯಕ ಗಂಗೂಲಿ ಹೇಳಿಬಿಟ್ಟಿದ್ದ. ಅದನ್ನು ಕೇಳಿ ಯುವರಾಜ್ ಸಿಂಗ್ ಭಯದ ನೆರಳಲ್ಲೇ ಕುಳಿತಿದ್ದ. ಆದರೆ ಯುವಿಯನ್ನು ಗಮನಿಸಿದ ಗಂಗೂಲಿ `ಸುಮ್ಮನೇ ಹೇಳಿದ್ದು ಮಹರಾಯ, ಯಾಕೆ ಭಯಪಡ್ತಿಯಾ’ ಎಂದ ಮೇಲೆಯೇ ಯುವಿ ಮನಸ್ಸು ತಿಳಿಯಾಗಿದ್ದು.
ಗಂಗೂಲಿಯನ್ನು ಗೇಲಿ ಮಾಡಿತ್ತು ಟೀಂ ಇಂಡಿಯಾ..!
ಒಂದು ದಿನ ಗಂಗೂಲಿ ಖುಷಿಯಿಂದಲೇ ಡ್ರೆಸ್ಸಿಂಗ್ ರೂಮ್ ಒಳಹೊಕ್ಕಿದ್ದ. ಆದರೆ ಪತ್ರಿಕೆಯಲ್ಲಿ ಗಂಗೂಲಿ ಬಗ್ಗೆ ಬಂದಿದ್ದ ಕೆಲ ಕೆಟ್ಟ ಕಮೆಂಟ್ ಗಳನ್ನು ಗುರುತಿಸಿದ್ದ ಹರ್ಭಜನ್ ಸಿಂಗ್ ಮತ್ತು ಆಶಿಶ್ ನೆಹ್ರಾ ಮಾತ್ರ ಗಂಗೂಲಿ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸತೊಡಗಿದರು. ಅದಕ್ಕೆ ಯುವರಾಜ್ ಸಿಂಗ್ ಕೂಡಾ ದನಿಗೂಡಿಸಿದ. ಇದರಿಂದ ಗಂಗೂಲಿ ಕಣ್ಣು ಕೆಂಪಗಾಗಿತ್ತು. ತಕ್ಷಣವೇ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್ ಎಚ್ಚೆತ್ತು `ಇವತ್ತು ಏಪ್ರಿಲ್ ಫಸ್ಟ್ ಮಾರಾಯ’ ಎಂದಾಗಲೇ ಗಂಗೂಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು.
ಸಚಿನ್ ಅಂದು ಕೋಪಿಸಿಕೊಂಡಿದ್ದೇಕೆ ಗೊತ್ತಾ..?
ಅದು 2004ರಲ್ಲಿ ನಡೆದಿದ್ದ ಮುಲ್ತಾನ್ ಟೆಸ್ಟ್. ಎದುರಿಗಿದ್ದುದ್ದು ಮಾತ್ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ. ಆದರೆ ಆ ತಂಡವನ್ನು ಚಚ್ಚಿ ಬಿಸಾಕಿದ್ದ ಸಚಿನ್ ಬರೋಬ್ಬರಿ 194 ರನ್ ಬಾರಿಸಿದ್ದರು. ಇನ್ನೇನು ಡಬಲ್ ಸೆಂಚುರಿ ಬಾರಿಸಿಬಿಡುತ್ತಾರೆ ಎನ್ನುವಷ್ಟರಲ್ಲಿ ನಾಯಕ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಇದರಿಂದ ಸಚಿನ್ ಡ್ರೆಸ್ಸಿಂಗ್ ರೂಮ್ಗೆ ಮರಳುವಾಗ ಬೆನ್ನು ತಟ್ಟತೊಡಗಿದವರಿಗೆ `ನನ್ನನ್ನು ಕೆಲ ಕ್ಷಣ ಬಿಟ್ಟು ಬಿಡಿ’ ಎಂದಿದ್ದರು.
ದಾವೂದ್ ಇಬ್ರಾಹಿಂಗೆ ಗೆಟ್ ಔಟ್ ಅಂದಿದ್ಯಾರು ಗೊತ್ತಾ..?
ದಾವೂದ್ ಇಬ್ರಾಹಿಂ ಎಂಥಾ ಚಾಣಕ್ಯ ಎಂದರೆ ಯಾವುದೇ ಕ್ರಿಕೆಟ್ ಟೀಮ್ ಡ್ರೆಸ್ಸಿಂಗ್ ರೂಮ್ ನ ಒಳಹೊಕ್ಕುಬಿಡುತ್ತಿದ್ದ. ಆದರೆ 1987ರಲ್ಲಿ ಮಾತ್ರ ಭಾರತದ ಡ್ರೆಸ್ಸಿಂಗ್ ರೂಮ್ ನಿಂದ ಅವಮಾನ ಅನುಭವಿಸಿ ಹೊರಬಿದ್ದಿದ್ದ. ಏಕೆಂದರೆ ಅಂದಿನ ನಾಯಕ ಕಪಿಲ್ ದೇವ್ ರವರು ದಾವೂದ್ ಇಬ್ರಾಹಿಂನ ಕಂಡ ಕೂಡಲೇ ಚಲ್ ಬಾಹರ್ ಚಲ್ ಎಂದಿದ್ದರಂತೆ.
ಗಾವಸ್ಕರ್ ಗೆ ಪಾಠ ಮಾಡಿದಾತ ಏನಾದ..?
1971ರ ಆಸ್ಟ್ರೇಲಿಯಾದ ಮೆಲ್ಬೋರ್ ನಲ್ಲಿ ರೆಸ್ಟ್ ಆಫ್ ವರ್ಲ್ಡ್ ವಿರುದ್ಧ ಪಂದ್ಯ ನಡೆಯುವುದಿತ್ತು. ಫಾರೂಕ್ ಇಂಜಿನಿಯರ್ ಜೊತೆ ಗಾವಸ್ಕರ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಮೈದಾನಕ್ಕಿಳಿಯುವ ಮುನ್ನ `ನೀನು ಸೊನ್ನೆಗೆ ಔಟಾಗಿ ಬರಬೇಡ. ಏಕೆಂದರೆ ಮೆಲ್ಬೋರ್ನ್ ಮೈದಾನದ ಪೆವಿಲಿಯನ್ ದೂರ ಇದೆ’ ಎಂದು ಫಾರೂಕ್ ಇಂಜಿನಿಯರ್ ಹೇಳಿದ್ದರಂತೆ. ಆದರೆ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲೇ ಫಾರೂಕ್ ಔಟಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ದರಂತೆ.
ಅಂದು ಕೊಹ್ಲಿ ದಂಗಾಗಿಹೋಗಿದ್ದ..!
ಕೊಹ್ಲಿಗೆ ಅದು ಮೊದಲ ಪಂದ್ಯ. ಆಟ ಇನ್ನೂ ಆರಂಭವಾಗಿರಲಿಲ್ಲ. ಆದರೆ ಉಳಿದೆಲ್ಲಾ ಆಟಗಾರರು ಕೊಹ್ಲಿಯನ್ನು ಕಿಂಡಲ್ ಮಾಡುತ್ತಿದ್ದರು. ಇದರಿಂದ ಕೊಹ್ಲಿ ದಂಗಾಗಿಹೋಗಿದ್ದ. ಆದರೆ ಯಾರೋ ಒಬ್ಬರು ಮೊದಲು ಸಚಿನ್ ಪಾಜಿ ಹತ್ತಿರ ಹೋಗಿ ಕಾಲಿಗೆ ಬಿದ್ದು ಆಶೀರ್ವಾದ ತಗೊ ಎಲ್ಲಾ ಸರಿ ಹೋಗುತ್ತೆ ಎಂದರಂತೆ. ಆಗ ಕೊಹ್ಲಿ ಸಚಿನ ಬಳಿ ಹೋಗಿ ಆಶೀರ್ವಾದ ಪಡೆದನಂತೆ. `ಎಲ್ಲರೂ ನಿನ್ನನ್ನು ಸುಮ್ಮನೇ ಕಿಂಡಲ್ ಮಾಡಿದ್ದರು. ಅದಕ್ಕೆಲ್ಲಾ ಕಿವಿಗೊಡಬೇಡ. ನಿನ್ನ ಭವಿಷ್ಯ ಉಜ್ವಲವಾಗಿರಲಿ’ ಎಂದರಂತೆ ಸಚಿನ್.
ಇಡೀ ತಂಡಕ್ಕೆ ಸ್ಫೂರ್ತಿ ತುಂಬಿದ್ದ ಸಚಿನ್
ಅದು 2003ರ ವಿಶ್ವಕಪ್ ಸಮಯ. ಮೊದಲ ಪಂದ್ಯ ಗೆದ್ದು, ಎರಡನೇ ಪಂದ್ಯದಲ್ಲಿ ಆಸ್ಟ್ರೇಯಲಿನ್ನರ ವಿರುದ್ಧ ಸೋಲನುಭವಿಸಿದ್ದ ಭಾರತದ ಆತ್ಮವಿಶ್ವಾಸವೇ ಕುಗ್ಗಿಹೋಗಿತ್ತು. ಆದರೆ ಅಂದು ಡ್ರೆಸ್ಸಿಂಗ್ ರೂಮ್ ನಲ್ಲಿ ಸಚಿನ್ ತೆಂಡೂಲ್ಕರ್ ಆಡಿದ ಸ್ಫೂತಿದಾಯಕ ಮಾತುಗಳು ಟೀಮ್ ಇಂಡಿಯಾವನ್ನು ಫೈನಲ್ ವರೆಗೆ ಕೊಂಡೊಯ್ದಿತ್ತು. ಅದು ಕೂಡಾ ಒಂದೂ ಪಂದ್ಯ ಸೋಲದೆ ಎಂಬುದು ವಿಶೇಷ.
ಡ್ರೆಸ್ಸಿಂಗ್ ರೂಮ್ ಗೆ ಬಂದಿದ್ದ ಆ ಅತಿಥಿ ಯಾರು..?
ಸಚಿನ್ ರವರಿಗೆ ಒಬ್ಬ ಕಟ್ಟಾ ಅಭಿಮಾನಿ ಇದ್ದಾನೆ. ಆತನ ಹೆಸರು ಸುದೀರ್ ಕುಮಾರ್ ಚೌಧರಿ ಅಂತ. ಬಹುಶಃ ಕ್ರಿಕೆಟ್ ನೋಡುವ ಎಲ್ಲಾ ಜನರಿಗೆ ಈತನ ಮುಖ ಪರಿಚಯ ಇದ್ದೇ ಇರುತ್ತದೆ. ವಿಶೇಷವೆಂದರೆ ಟೀಮ್ ಇಂಡಿಯಾ 2011ರಲ್ಲಿ ವಿಶ್ವಕಪ್ ಗೆದ್ದ ಬಳಿಕ ಸಚಿನ್ ಸಂತೋಷದ ಅಲೆಯಲ್ಲಿ ತೇಲಿದ್ದರು. ಅಲ್ಲದೇ ತಮ್ಮ ಅಭಿಮಾನಿ ಸುದೀರ್ರನ್ನು ಡ್ರೆಸ್ಸಿಂಗ್ ರೂಮ್ ಗೆ ಕರೆದು ಟ್ರೋಫಿಯೊಂದಿಗೆ ಒಂದು ಫೋಸನ್ನೂ ಕೊಟ್ಟಿದ್ದರು. ಅಂದು ಭಾರತದ ಡ್ರೆಸ್ಸಿಂಗ್ ರೂಮ್ ಕೆಲ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು.
ಅಂದು ಡ್ಯಾನ್ಸಿಂಗ್ ಪಾರ್ಟಿ ನಡೆದಿತ್ತು..!
ಟೀಮ್ ಇಂಡಿಯಾ ಅಂದು ಜಯಭೇರಿ ಬಾರಿಸಿತ್ತು ಅನ್ಸುತ್ತೆ. ಅದೇ ಖುಷಿಯಲ್ಲಿದ್ದ ನಾಯಕ ಕಪಿಲ್ ದೇವ್, ಅಜರುದ್ದಿನ್ ಸೇರಿದಂತೆ ತಂಡದ ಇತರೆ ಸದಸ್ಯರು ಸೇರಿ ಭರ್ಜರಿ ಡ್ಯಾನ್ಸ್ ಮಾಡಿದ್ದರು..! ಆ ಕ್ಷಣಕ್ಕೆ ಸಚಿನ್, ಕನ್ನಡಿಗರಾದ ಜಾವಗಲ್ ಶ್ರೀನಾಥ್, ಕುಂಬ್ಳೆ, ಆಕಾಶ್ ಚೋಪ್ರಾ ಸಾಕ್ಷಿಯಾಗಿದ್ದರು.
ಪಾರ್ಥೀವ್ ಪಟೇಲ್ ಗೆ ಸ್ಟೀವ್ ವಾ ಹೇಳಿದ್ದೇನು ಗೊತ್ತಾ..?
ಸಿಡ್ನಿಯಲ್ಲಿ ನಡೆದ ಆ ಟೆಸ್ಟ್ ಎರಡು ವಿಭಿನ್ನ ಘಟನೆಗಳಿಗೆ ಸಾಕ್ಷಿಯಾಗಿತ್ತು. ಅಂದು ವಿಶ್ವಶ್ರೇಷ್ಟ ಆಟಗಾರ ಸ್ಟೀವ್ ವಾ ರಿಟೈರ್ ಆಗುತ್ತಿದ್ರು. ಆದರೆ ಪಾರ್ಥೀವ್ ಪಟೇಲ್ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಆಗ ನಡೆದ ಒಂದು ಘಟನೆ ಸದಾ ಕಾಲಕ್ಕೂ ನೆನಪಲ್ಲಿ ಉಳಿಯುವಂತದ್ದಾಗಿದೆ. ಅದೇನೆಂದರೆ `ಸ್ಟೀವ್, ಇಂದು ನಿನ್ನಿಷ್ಟದ ಸ್ಲಾಗ್ ಸ್ವೀಪ್ ನ ಬಾರಿಸು. ಏಕೆಂದರೆ ಇಂದು ಬಿಟ್ಟರೆ ಇನ್ಯಾವತ್ತೂ ನಿನ್ನಿಂದ ಸ್ಲಾಗ್ ಸ್ವೀಪ್ ಬಾರಿಸಲು ಆಗಲ್ಲ’ ಎಂದು ಪಾರ್ಥೀವ್ ಪಟೇಲ್ ಕಿಂಡಲ್ ಮಾಡಿದ್ದ. `ನೋಡು ಬೇಬಿ, ಸ್ವಲ್ಪ ಗೌರವದಿಂದ ಮಾತನಾಡು. ಏಕೆಂದರೆ ನಾನು ಕ್ರಿಕೆಟ್ಗೆ ಎಂಟ್ರಿ ಕೊಟ್ಟಾಗ ನೀನು ಬಾಯಲ್ಲಿ ನಿಪ್ಪಲ್ ಇಟ್ಟುಕೊಂಡು ಚೀಪುತ್ತಿದ್ದೆ’ ಎಂದು ಸ್ಟೀವ್ ವಾ ಹೇಳಿದಾಗ ಹತ್ತಿರದಲ್ಲಿದ್ದವರು ಗೊಳ್ಳೆಂದು ನಕ್ಕಿದ್ದರು.
ವಿಶ್ವಕಪ್ ಸೋತಾಗ ಕೂಲಾಗಿದ್ದವ ಯಾರು ಗೊತ್ತಾ..?
2007ರ ವಿಶ್ವಕಪ್ನಲ್ಲಿ ಬಾಂಗ್ಲದೇಶದ ವಿರುದ್ಧ ಆಘಾತಕಾರಿ ಸೋಲುಂಡಿದ್ದ ಭಾರತ, ಟೂರ್ನಿಯಿಂದಲೇ ಹೊರಬಿದ್ದಿತ್ತು. ಆಗ ಸಚಿನ್ ಮತ್ತು ಗಂಗೂಲಿಯ ರೆಸ್ಟೋರೆಂಟ್ ಗಳಿಗೆ ಕಲ್ಲುಗಳನ್ನು ಎಸೆಯಲಾಗಿತ್ತು. ಜಹೀರ್ ಖಾನ್ ಮನೆ ಮೇಲೆ ಕಲ್ಲು ತೂರಲಾಗಿತ್ತು. ಧೋನಿಯ ಮನೆ ಘಾಜುಗಳು ಪುಡಿಪುಡಿಯಾಗಿತ್ತು. ಇದರಿಂದ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ನಲ್ಲಿ ದುಗುಡ ಆವರಿಸಿತ್ತು. ಆದರೆ ಮುನಾಫ್ ಪಟೇಲ್ ಮಾತ್ರ ಏನೂ ಆಗಿಲ್ಲವೆಂಬಂತೆ ಸುಮ್ಮನೆ ಕುಳಿತಿದ್ದ. ಅದನ್ನು ಗಮನಿಸಿದ ಸಚಿನ್ `ನಿನ್ನ ಮನೆಗೆ ಕಲ್ಲು ಬೀಳಲಿಲ್ಲವೇನು’ ಎಂದರು. ಆಗ `ಪಾಜಿ ನನ್ನ ಮನೆಯ ಸುತ್ತಮುತ್ತ ಇರುವ 8000 ಜನರೇ ನನಗೆ ಭದ್ರತಾ ಕಾವಲುಗಾರರಿದ್ದಂತೆ. ಅವರನ್ನು ವಂಚಿಸಿ ಯಾರು ನನ್ನ ಮನೆಗೆ ಕಲ್ಲು ಎಸೆಯುತ್ತಾರೆ’ ಎಂದ ಮುನಾಫ್. ಇದನ್ನು ಕೇಳಿದ ಸಚಿನ್ ನಾವೂ ನಿನ್ನ ಮನೆಗೆ ಬರುವುದು ಒಳಿತಲ್ಲವೇ ಎಂದಿದ್ದರು..!
ಗಂಗೂಲಿ ಅಂದು ಶರ್ಟ್ ಬಿಚ್ಚಿ ಕುಣಿದಾಡಿದ್ದರು.
ಅದು 2002ರಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ನಾಟ್ವೆಸ್ಟ್ ಸರಣಿಯ ಪಂದ್ಯ. ಭಾರತಕ್ಕೆ ಅಂದು ಇಂಗ್ಲೆಂಡ್ ಭಾರೀ ಮೊತ್ತದ ಸವಾಲನ್ನು ನೀಡಿತ್ತು. ಆದರೆ ಅದನ್ನು ಭಾರತ ನಿರಾಯಾಸವಾಗಿ ಬೆನ್ನಟ್ಟಿ ಗೆದ್ದಿತ್ತು. ಇಷ್ಟಕ್ಕೂ ಪಂದ್ಯಕ್ಕೂ ಮುನ್ನ ಒಂದು ಘಟನೆ ನಡೆದಿತ್ತು ಅದೇನೆಂದರೆ. ಗಂಗೂಲಿ ಮತ್ತು ಅಂದಿನ ಕೋಚ್ ಜಾನ್ ರೈಟ್ ಒಬ್ಬರಿಗೊಬರು ಮುನಿಸಿಕೊಂಡಿದ್ದರು. ಆ ವೇಳೆ ರೈಟ್ ಜೊತೆ ಗಂಗೂಲಿ ಮಾತನಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಪಂದ್ಯ ಗೆದ್ದ ಬಳಿಕ ಗಂಗೂಲಿ ಶರ್ಟ್ ಬಿಚ್ಚಿ ಕುಣಿದಾಡಿದ್ದರು. ಬಳಿಕ ಗಂಗೂಲಿ, ರೈಟ್ ರ ಮುನಿಸು ಮಾಯವಾಗಿ ಇಬ್ಬರೂ ಪರಸ್ಪರ ಒಳ್ಳೆಯ ಮಿತ್ರರಾಗಿದ್ದು ಇತಿಹಾಸ.