ಕೇರಳದ ಕರಿಪುರ ವಿಮಾನ ದುರಂತ ನಿಜಕ್ಕೂ ದೇಶವನ್ನು ಬೆಚ್ಚಿ ಬೀಳಿಸಿದೆ. ದುಬೈನಿಂದ ಬಂದ ಏರ್ ಇಂಡಿಯಾ IX1344 ಎಕ್ಸ್‌ಪ್ರೆಸ್ ವಿಮಾನವು ಅಪಘಾತಕ್ಕೀಡಾಗಿದೆ. ಕೋಯಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ತುಂಡಾಗಿದೆ. ಈ ದುರಂತದಲ್ಲಿ 18 ಜನರು ದುರ್ಮರಣಕ್ಕೀಡಾಗಿದ್ದರೆ, 123 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 15 ಜನರ ಸ್ಥಿತಿ ಗಂಭೀರ ವಾಗಿದೆ.
ಈ ಅವಘಡ ನಡೆದಿರುವ ವಿಮಾನ ನಿಲ್ದಾಣವು ಟೇಬಲ್‌ಟಾಪ್ ರನ್‌ವೇಯನ್ನು ಹೊಂದಿದೆ. ಕರಿಪುರ ವಿಮಾನ ದುರಂತವು ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಘಟನೆಯನ್ನು ನೆನಪಿಸಿದೆ. ಮಂಗಳೂರಿನ ಏರ್ ಪೋರ್ಟ್ ಕೂಡ ಟೇಬಲ್ ಟಾಪ್ ರನ್ ವೇ ಹೊಂದಿದೆ.
ಅಂದ ಹಾಗೇ ಟೇಬಲ್‌ಟಾಪ್ ರನ್‌ವೇಗಳಲ್ಲಿ
ಅತ್ಯುತ್ತಮ ವಾಣಿಜ್ಯ ಪೈಲಟ್‌ಗಳೂ ಕೂಡ ವಿಮಾನವನ್ನು ಇಳಿಸುವುದು ಕಷ್ಟಕರವೆಂದು ಹೇಳಲಾಗುತ್ತದೆ.
ಟೇಬಲ್ ಟಾಪ್ ರನ್ ವೇಗಳನ್ನು ಬೆಟ್ಟದ ಮೇಲೆ ಮೇಲ್ಮೈಯನ್ನು ನೆಲಸಮಗೊಳಿಸುವ ಮೂಲಕ ನಿರ್ಮಿಸಲಾಗಿರುತ್ತದೆ. ಇಂತಹ ವಿಮಾನ ನಿಲ್ದಾಣದ ರನ್‌ವೇಗಳ ಒಂದು ಬದಿಯಲ್ಲಿ ಅಥವಾ ಎರಡೂ ಬದಿಗಳಲ್ಲಿ ಕಡಿದಾದ ಅಥವಾ ಅಳವಾದ ಕಂದಕ ಹೊಂದಿರುತ್ತದೆ ಕೂಡ. ಇದರಿಂದಾಗಿ ಈ ರನ್ ವೇಗಳಲ್ಲಿ ಎಷ್ಟೇ ಜಾಗೃತಿ ವಹಿಸಿದರೂ ಕಡಿಮೆಯೇ.
ಇಂತಹ ರಚನೆಯನ್ನು ಹೊಂದಿರುವ ವಿಮಾನ ನಿಲ್ದಾಣಗಳು ಭಾರತದಲ್ಲಿ ಮೂರು ಕಡೆಯಲ್ಲಿವೆ. ಮೊದಲನೆಯದಾಗಿ ಆ.೭ರಂದು ಅಫಘಾತ ಸಂಭವಿಸಿದ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣ, ಎರಡನೆಯದು ಹತ್ತು ವರ್ಷಗಳ ಹಿಂದೆ ದುರಂತ ಕಂಡಿದ್ದ ಮಂಗಳೂರು ವಿಮಾನ ನಿಲ್ದಾಣ, ಮಿಜೋರಾಂನ ಲೆಂಗ್‌ಪುಯಿ ಏರ್ ಪೋರ್ಟ್.
10 ವರ್ಷಗಳ ಹಿಂದೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟೇಬಲ್‌ಟಾಪ್ ರನ್‌ವೇಯಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಇದೇ ರೀತಿ ದುರಂತ ಸಂಭವಿಸಿತ್ತು. ದುಬೈನಿಂದ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸುತ್ತಿದ್ದ ವಿಮಾನ
ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ 158 ಜನರು ಸಾವನ್ನಪ್ಪಿದ್ದು, 8 ಮಂದಿ ಬದುಕುಳಿದಿದ್ದರು.
ಇದು ಭಾರತೀಯ ವಿಮಾನಯಾದ ಇತಿಹಾಸದಲ್ಲಿ ಭೀಕರವಾಗಿ ನಡೆದ ಘಟನೆಯಾಗಿ ಉಳಿದುಕೊಂಡಿದೆ.
ಟೇಬಲ್ ಟಾಪ್ ರನ್ ವೇ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಇಳಿಸಲು ಪೈಲಟ್ ಕೌಶಲ್ಯ ಅತಿ ಅಗತ್ಯ. ತುಸು ಹೆಚ್ಚು ಕಡಿಮೆಯಾದರೂ ಅಪಘಾತ ಕಟ್ಟಿಟ್ಟ ಬುತ್ತಿ. ನಿರ್ದಿಷ್ಟ ಪ್ರದೇಶದಲ್ಲೇ ವಿಮಾನದ ಚಕ್ರ ಭೂಮಿಗೆ ತಾಗಬೇಕು. ಇಷ್ಟೇ ದೂರಕ್ಕೆ ಹೋಗಿ ವಿಮಾನ ನಿಂತುಕೊಳ್ಳಬೇಕು ಎಂಬ ಲೆಕ್ಕಾಚಾರ ಪೈಲಟ್‌ಗೆ ಇರಬೇಕಾಗುತ್ತದೆ. ವಿಮಾನ ಕೆಳಕ್ಕಿಳಿಯುತ್ತಿದ್ದಂತೆ, ರನ್‌ವೇ ಉದ್ದವನ್ನು ಮನಸ್ಸಿನಲ್ಲೇ ಅಂದಾಜಿಸಿ ನಿರ್ದಿಷ್ಟ ಸ್ಥಳದಲ್ಲಿ ನೆಲ ತಾಗಬೇಕಾಗುತ್ತದೆ.
ಆದ್ದರಿಂದ ಟೇಬಲ್‌ಟಾಪ್‌ನಂತಹ ವಿಮಾನ ನಿಲ್ದಾಣಗಳಲ್ಲಿ ಎಲ್ಲ ವಿಮಾನಗಳನ್ನು ಇಳಿಯಲು ಅನುಮತಿಸುವುದಿಲ್ಲ. ನಿರ್ದಿಷ್ಟ ಮಾದರಿಯ ವಿಮಾನಗಳಿಗೆ ಮಾತ್ರ ಇಳಿಯಲು ಅವಕಾಶವಿರುತ್ತದೆ. ಪೈಲಟ್ ಅವರ ಸ್ವಂತ ಲೆಕ್ಕಾಚಾರ ಮತ್ತು ಕಂಟ್ರೋಲ್ ರೂಂನ ಸೂಚನೆಗಳನ್ನು ಆಧರಿಸಿಯೇ ಇಳಿಸಬೇಕಾಗಿರುತ್ತದೆ. ಇದರಿಂದಾಗಿ ಜಗತ್ತಿನಲ್ಲಿ ಇಂತಹ ವಿಮಾನ ನಿಲ್ದಾಣಗಳು ಹೆಚ್ಚು ಅಪಾಯಕಾರಿ ಎಂದು ಪರಿಗಣಿತವಾಗುತ್ತದೆ.
ಅಂದ ಹಾಗೆ, ಈ ಕರಿಪುರ್ ವಿಮಾನ ನಿಲ್ದಾಣವು ಮಲಪ್ಪುರಂಗೆ 25 ಕಿ.ಮೀ ಹಾಗೂ ಕೋಳಿಕ್ಕೋಡ್ ನಿಂದ 28 ಕಿ.ಮೀ. ದೂರದಲ್ಲಿದೆ. ಭಾರತದಲ್ಲಿನ ಮೂರು ಟೇಬಲ್ ಟಾಪ್ ರನ್ ವೇ ಇರುವ ವಿಮಾನ ನಿಲ್ದಾಣದಲ್ಲಿ ಇದೂ ಒಂದು. ಇಲ್ಲಿ ವಿಮಾನವನ್ನು ಕೆಳಗೆ ಇಳಿಸುವುದು ಎಂಥ ನುರಿತ ಹಾಗೂ ಅನುಭವಿ ಪೈಲಟ್ ಗೂ ಸವಾಲಿನ ಸಂಗತಿ. ಕರಿಪುರ್ ವಿಮಾನ ನಿಲ್ದಾಣದಲ್ಲಿ ಮೂರು ಕಡೆ ಕಣಿವೆ ಇದ್ದು, ಮಧ್ಯದಲ್ಲಿ ಬೆಟ್ಟ ಇದೆ.
ಈ ಹಿಂದೆ ಕರ್ನಾಟಕದ ಮಂಗಳೂರಿನಲ್ಲಿ ವಿಮಾನ ದುರಂತ ಸಂಭವಿಸಿದಾಗಲೇ ದೇಶದ ಉಳಿದ ಎರಡು ಕಡೆಯ ಟೇಬಲ್ ಟಾಪ್ ರನ್ ವೇಗಳಲ್ಲಿ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ಮಾಡಿದ್ದರು.