‘ಡಾಲಿ’ ಎಂದೇ ಖ್ಯಾತಿ ಗಳಿಸಿರುವ ನಟ ಧನಂಜಯ್, ನಾಯಕನಾಗಿ ನಟಿಸಿದ ಪ್ರಥಮ ಚಿತ್ರ ‘ಡೈರೆಕ್ಟರ್ ಸ್ಪೆಷಲ್’. ಇದಾದ ಬಳಿಕ ಒಂದು ದಶಕದ ಅವಧಿಯಲ್ಲಿ ಧನಂಜಯ್ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದರು. ಆದರೆ, ಯಶಸ್ಸು ಎಂಬುದು ಅವರ ಪಾಲಿಗೆ ಮರೀಚಿಕೆಯಾಗಿತ್ತು. 2018ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್ ನಾಯಕರಾಗಿದ್ದ ‘ದುನಿಯಾ ಸೂರಿ’ ನಿರ್ದೇಶನದ ‘ಟಗರು’ ಚಿತ್ರದಲ್ಲಿ ಧನಂಜಯ್ ನಟಿಸಿದ ‘ಡಾಲಿ’ ಪಾತ್ರ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿತು. ‘ಟಗರು’ ಸಿನಿಮಾ ಬಳಿಕ ಡಾಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇಂದು ಧನಂಜಯ್ ಅವರಿಗೆ 34ನೇ ಹುಟ್ಟುಹಬ್ಬದ ಸಂಭ್ರಮ.
ಈ ವರ್ಷ ಕೊರೊನಾ ವೈರಸ್ ಹಾವಳಿಯಿಂದಾಗಿ ಸರಳವಾಗಿ ಹುಟ್ಟುಹಬ್ಬವನ್ನು
ಆಚರಿಸಿಕೊಂಡಿದ್ದಾರೆ ನಟ ಧನಂಜಯ್. ಇನ್ನು ಹುಟ್ಟು ಹಬ್ಬದ ಮೊದಲೇ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಈ ಬಾರಿ ಕೊರೊನಾ ಹಾವಳಿ ಇರುವುದರಿಂದ ಹುಟ್ಟು ಹಬ್ಬದ ಆಚರಣೆ ಮಾಡುವುದು ಬೇಡ ನೀವಿರುವ ಜಾಗದಿಂದ ಶುಭ ಹಾರೈಸಿ ಅಂತಾ ಮನವಿಯನ್ನು ಮಾಡಿಕೊಂಡಿದ್ದರು ಡಾಲಿ. ಅದರಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ನಟ ಧನಂಜಯ್ ಹುಟ್ಟು ಹಬ್ಬಕ್ಕೆ ಸ್ಟಾರ್ ನಟರು, ನಟಿಯರು ಹಾಗೂ ನಿರ್ದೇಶಕರು ಶುಭಾಶಯಗಳನ್ನ ತಿಳಿಸಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಧನಂಜಯ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಡಾಲಿ’ ಎಂದು ವಿಶ್ ಮಾಡಿದ್ದು, ಧನಂಜಯ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ದರ್ಶನ್ ಪ್ರೀತಿಯ ಶುಭಾಶಯಕ್ಕೆ ಧನಂಜಯ್ ಧನ್ಯವಾದಗಳನ್ನ ತಿಳಿಸಿದ್ದಾರೆ. ಅಂದಹಾಗೆ ದರ್ಶನ್ ಮತ್ತು ಧನಂಜಯ್ ಇಬ್ಬರು ‘ಯಜಮಾನ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು.
‘ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ. ಸವಾಲು, ಸಕ್ಸಸ್, ಸಂತೋಷ, ಯಾವಾಗಲು ನಿನ್ನ ಜೊತೆಗಿರಲಿ’ ಎಂದು ಸತೀಶ್ ನೀನಾಸಂ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ನೀನಾಸಂ ಸತೀಶ್ ಮತ್ತು ಧನಂಜಯ್ ಇಬ್ಬರು ಉತ್ತಮ ಗೆಳೆಯರಾಗಿದ್ದು, ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ನಗುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ನಟ ವಸಿಷ್ಟ ಸಿಂಹ ಸಹ ಧನಂಜಯ್ ಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.‘ನಗುತಾ ನಗುತಾ ಬಾಳು ನೀನು ನೂರು ವರುಷ’ ಎಂದು ವಿಜಿ ವಿಶ್ ಮಾಡಿದ್ದಾರೆ. ‘ಸಲಗ’ ಸಿನಿಮಾ ತಂಡದ ಕಡೆಯಿಂದ ಧನಂಜಯ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ‘ಸಲಗ’ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಹುಟ್ಟುಹಬ್ಬದ ವಿಶೇಷವಾಗಿ ಬಹು ನಿರೀಕ್ಷೆಯ ‘ಯುವರತ್ನ’ ಸಿನಿಮಾದ ಲುಕ್ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಧನಂಜಯ್ ಆಂಟೋನಿ ಜೋಸೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ನಿರೂಪ್ ಭಂಡಾರಿ ಸೇರಿದಂತೆ ಅನೇಕರು ಧನಂಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಧನಂಜಯ್ ಯುವರತ್ನ, ಸಲಗ, ಬಡವ ರಾಸ್ಕಲ್, ಡಾಲಿ, ರತ್ನನ್ ಪ್ರಪಂಚ, ಹೆಡ್ ಬುಷ್ ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.