ಡಿಕೆ ಶಿವಕುಮಾರ್ ಅವರು ಗ್ಯಾರಂಟಿಗಳನ್ನು ನಿಲ್ಲಿಸ್ತೇವೆ ಅಂದಿಲ್ಲ: ಡಾ.ಜಿ.ಪರಮೇಶ್ವರ್
ಬೆಂಗಳೂರು: ಡಿಕೆ ಶಿವಕುಮಾರ್ ಅವರು ಗ್ಯಾರಂಟಿಗಳನ್ನು ನಿಲ್ಲಿಸ್ತೇವೆ ಅಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲ ಇಲ್ಲ, ಅನುಷ್ಠಾನ ಆಗುತ್ತಿದೆ. ಆ ಕುರಿತು ಏನೇ ಚರ್ಚೆ ಆದರೂ ಸಚಿವ ಸಂಪುಟಕ್ಕೆ ಬರಬೇಕು.
ನಾವು ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಗ್ಯಾರಂಟಿ ಮುಂದುವರಿಸುತ್ತೇವೆ ಎಂದು ಪದೇಪದೆ ಹೇಳಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ಡಿಕೆ ಶಿವಕುಮಾರ್ ಅವರ ಮಾತು ಉಲ್ಲೇಖಿಸಿ ಹೇಳಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರೇ ನೀವು ಕೊಟ್ಟ ಭರವಸೆ ಅನುಷ್ಠಾನ ಆಯಿತಾ? 2 ಕೋಟಿ ಉದ್ಯೋಗ ಕೊಡುತ್ತೇನೆ ಅಂದಿದ್ರಿ, ಜಾರಿ ಆಯ್ತಾ? ಪ್ರತಿಯೊಬ್ಬರ ವರಮಾನ ದ್ವಿಗುಣವಾಯ್ತಾ? ತಾವು ಕೊಟ್ಟ ಭರವಸೆ ಅನುಷ್ಠಾನ ಮಾಡಿಲ್ಲ. ನಾವು ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಡಿಕೆ ಶಿವಕುಮಾರ್ ಅವರು ಸಹ ಗ್ಯಾರಂಟಿಗಳನ್ನು ನಿಲ್ಲಿಸ್ತೇವೆ ಅಂದಿಲ್ಲ ಎಂದು ತಿಳಿಸಿದರು.






