ತಮಿಳುನಾಡಿನಲ್ಲಿ ಮೀರಾ ಮಿಥುನ್ ಹೆಸರಿನ ನಟಿ ಕಮ್ ಮಾಡೆಲ್ ಒಬ್ಬರಿದ್ದಾರೆ ಕೇವಲ ತಮ್ಮ ವಿವಾದಾತ್ಮಕ ಹೇಳಿಕೆಗಳು, ಗ್ಲಾಮರಸ್ ಚಿತ್ರಗಳಿಂದಷ್ಟೆ ಅವರು ಖ್ಯಾತರು. ಸುದ್ದಿಯಲ್ಲಿರುರಬೇಕೆಂಬ ಹಂಬಲದಿಂದ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ನಟಿ ಈಗ ಎಲ್ಲೆ ಮೀರಿ ಇಡೀಯ ತಮಿಳು ಚಿತ್ರೋದ್ಯಮವನ್ನೇ ಕೀಳು ಅಭಿರುಚಿಯಿಂದ ಕೂಡಿದ ಬೈಗುಳ ಬಳಸಿ ಬೈದಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಹ ಹೇಳಿದ್ದಾರೆ.
ದಕ್ಷಿಣ ಭಾರತದ ಹಳೆಯ ಹಾಗೂ ಶ್ರೀಮಂತ ಚಿತ್ರೋದ್ಯಮ ಎನಿಸಿಕೊಂಡಿರುವ ತಮಿಳು ಚಿತ್ರೋದ್ಯಮವನ್ನು ವೇಶ್ಯಾಗೃಹಕ್ಕೆ ಮೀರಾ ಮಿಥುನ್ ಹೋಲಿಸಿದ್ದಾರೆ. ತಮಿಳುನಾಡಿನಲ್ಲಿ ನನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಹ ಆರೋಪಿಸಿದ್ದಾರೆ. ನಟಿಯ ಈ ಹೇಳಿಕೆಗೆ ತಮಿಳುನಾಡಿನ ಸಿನಿ ಪ್ರೇಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಪ್ರಕಟಿಸಿರುವ ಮೀರಾ ಮಿಥುನ್, ತನ್ನನ್ನು ತಾನು ಭಾರತದ ಸೂಪರ್ ಮಾಡೆಲ್ ಎಂದು ಸಂಭೋಧಿಸಿಕೊಂಡು, ಪ್ರಧಾನಿ ಮೋದಿಗೆ ತಮಿಳುನಾಡು ಹಾಗೂ ಅಲ್ಲಿನ ಚಿತ್ರರಂಗದ ಕುರಿತಾಗಿ ದೂರುಗಳನ್ನು ಹೇಳಿದ್ದಾರೆ. ”ತಮಿಳುನಾಡಿನಲ್ಲಿ ಮಹಿಳೆಯರ ಮೇಲೆ ಪ್ರತಿ ಸೆಕೆಂಡ್ ದೌರ್ಜನ್ಯ ನಡೆಯುತ್ತಿದೆ. ಅದರಲ್ಲಿಯೂ ತಮಿಳುನಾಡು ಸಿನಿಮಾ ಉದ್ಯಮವಂತೂ ವೇಶ್ಯಾಗೃಹದಂದಾತಿಗಿದ್ದು, ಸ್ವಜನಪಕ್ಷಪಾತ ಎನ್ನುವುದು ಅತಿಯಾಗಿದೆ” ಎಂದಿದ್ದಾರೆ.