ತಮ್ಮ ಬಳಿ ಯಾವುದೇ ದಾಖಲೆ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷನಾಗಿ ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ಕೊಡಿ ಎಂದು ಕೇಳಿದ್ದೇನೆ. ನನ್ನ ಬಳಿ ಏನೂ ಇಲ್ಲ ಎಂದು ರಾಜಣ್ಣ ಅವರು ಹೇಳಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ರಾಜಣ್ಣ ತಮ್ಮನ್ನು ಭೇಟಿ ಮಾಡಿದ್ದರಾ ಎಂದು ಕೇಳಿದಾಗ, “ಕೆಪಿಸಿಸಿ ಅಧ್ಯಕ್ಷನಾಗಿ ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ಕೊಡಿ ಎಂದು ಕೇಳಿದ್ದೇನೆ.
ನನ್ನ ಬಳಿ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ಅವರು ನನ್ನ ಬಳಿ ಇನ್ನೂ ಏನೇನೂ ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದೆ ಹೇಳಲು ಆಗುವುದಿಲ್ಲ. ನಿಮ್ಮದು ಏನಾದರೂ ಇದ್ದರೆ ದೂರು ನೀಡಿ ಎಂದು ಹೇಳಿದ್ದೇನೆ. ಅವರು ಕೋಲಾರದಲ್ಲಿ ಈಗಾಗಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ” ಎಂದು ಕೇಳಿದರು.
ನಿನ್ನೆ ತಮಿಳುನಾಡಿಗೆ ತೆರಳಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರವಾಗಿ ರಾಜ್ಯದ ನಿಲುವು ತಿಳಿಸಿದ್ದೇನೆ. ದಕ್ಷಿಣ ಭಾರತ ಹಾಗೂ ಇತರೆ ರಾಜ್ಯಗಳ ಕ್ಷೇತ್ರಗಳನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಸಂಬಂಧ ಪಟ್ಟ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಮಾಡಿದ್ದರು. ನಮ್ಮ ಸಿಎಂ ಅವರು ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನಾನು ಸಭೆಗೆ ಹೋಗಿ ಸರ್ಕಾರದ ಪ್ರತಿನಿಧಿಯಾಗಿ ನಮ್ಮ ಪ್ರಸ್ತಾವನೆ ಸಲ್ಲಿಸಿದ್ದೇನೆ.
ಈ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದ ಎಲ್ಲಾ ವಿಚಾರಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ನಮ್ಮ ರಾಜ್ಯದಲ್ಲಿ 2 ಕ್ಷೇತ್ರಗಳನ್ನು ಕಡಿಮೆ ಮಾಡುವ ದೊಡ್ಡ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಇದು ನಮ್ಮ ರಾಜ್ಯ ಹಾಗೂ ದಕ್ಷಿಣ ಭಾರತದ ಸ್ವಾಭಿಮಾನದ ವಿಚಾರ” ಎಂದು ಹೇಳಿದರು.