ಸರ್ಕಾರಿ ಶಾಲಾ ಶಿಕ್ಷಕರನ್ನು ಅವರ ಸೇವಾವಧಿಯಲ್ಲಿ ಒಂದು ಬಾರಿ ಅವರ ತವರು ಜಿಲ್ಲೆಗೆ ನೇಮಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಈ ಬಗ್ಗೆ ಅಭಿಪ್ರಾಯ ಕ್ರೋಢೀಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ಕೋವಿಡ್ ಕಾರಣದಿಂದಾಗಿ ಕಳೆದ 18 ತಿಂಗಳಿನಿಂದ ಬಹುತೇಕ ಶಾಲೆಗಳು ಮುಚ್ಚಿದ್ದು, ಈ ಮಧ್ಯೆ ಎರಡು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆಯೂ ನಡೆಯದೆ ಶಿಕ್ಷಕರು ಗೊಂದಲಕ್ಕೆ ಬಿದ್ದಿದ್ದಾರೆ. ಈ ಮಧ್ಯೆ ಶಿಕ್ಷಣ ಇಲಾಖೆ ಹೊರಡಿಸಿರುವ ಈ ನೂತನ ಆದೇಶದಿಂದ ಶಿಕ್ಷಕರಲ್ಲಿ ಸ್ವಲ್ಪ ಮಟ್ಟಿನ ಆಶಾದಾಯಕ ಮೂಡಿದೆ.
“ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಒಂದು ಬಾರಿ ಅವರು ಬಯಸುವ ಜಿಲ್ಲೆಗೆ ಹಂತಹಂತವಾಗಿ ವರ್ಗಾಯಿಸುವ ಬಗ್ಗೆ ಶಿಕ್ಷಕರ ಅಭಿಮತ ಕ್ರೋಢೀಕರಿಸಬೇಕು. ಈ ಬಗ್ಗೆ ಶೈಕ್ಷಣಿಕ ತಾಲ್ಲೂಕು ಮಟ್ಟದಲ್ಲಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಓ) ಶಿಕ್ಷಕರ ಅಭಿಪ್ರಾಯಗಳನ್ನು ಪಡೆದು ವರದಿ ನೀಡಬೇಕು” ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಚಿವರಿಗೆ ಪತ್ರ ಬರೆದು ಮನವಿ ಮಾಡಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ಆಯ್ದ ಶಿಕ್ಷಕರು ಮತ್ತು ಶಿಕ್ಷಕರ ಪ್ರತಿನಿಧಿ ಸಂಘಟನೆಗಳ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲಿಯೇ ವರದಿ ತಯಾರಿಸಿ ಇಲಾಖೆಗೆ ಸಲ್ಲಿಸುವ ಸಾಧ್ಯತೆ ಇದೆ.