ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರದಲ್ಲಿ ಹಾಗೂ ಜೆಡಿಎಸ್ ಹಾಸನದಲ್ಲಿ ಮಾತ್ರ ಗೆದ್ದಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಿದ್ದಾರೆ.
ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಕೆ.ಹೆಚ್ ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಸೇರಿದಂತೆ ಮೈತ್ರಿ ಪಡೆಯ ಅನೇಕ ದಿಗ್ಗಜರು ಹೀನಾಯವಾಗಿ ಸೋಲುಂಡಿದ್ದಾರೆ. ಹಾಸನದಲ್ಲಿ ಗೆಲುವು ಸಾಧಿಸಿ ಮೊದಲ ಸಲ ಸಂಸತ್ ಪ್ರವೇಶಿಸುವ ಅವಕಾಶ ಪಡೆದಿದ್ದಾರೆ. ಆದರೆ, ಅದನ್ನು ಬೇಡ ಎಂದು ತನ್ನ ತಾತಾ ದೇವೇಗೌಡರಿಗಾಗಿ ಹಾಸನ ಬಿಟ್ಟು ಕೊಡಲು ನಿರ್ಧಾರ ಮಾಡಿದ್ದಾರೆ.
ದೇವೇಗೌಡರು ಹೋರಾಟದಿಂದ ಬಂದವರು. ತುಮಕೂರು ಜಿಲ್ಲೆಗೂ ಅನೇಕ ಕೊಡುಗೆ ನೀಡಿದ್ದರು. ಆದರೂ ಅವರು ಸೋತಿದ್ದಾರೆ. ಅವರ ಸೋಲಿನಿಂದಾಗಿ ನಾನು ನನ್ನ ಗೆಲುವನ್ನು ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ನಾನು ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಬಳಿಕ ದೇವೇಗೌಡರನ್ನು ಇಲ್ಲಿಂದ ಗೆಲ್ಲಿಸಿ ವಿಜಯೋತ್ಸವ ಆಚರಣೆ ಮಾಡೋಣ ಎಂದು ಪ್ರಜ್ವಲ್ ರೇವಣ್ಣ ಹಾಸನದ ಜನತೆಗೆ ತಿಳಿಸಿದ್ದಾರೆ. ನನ್ನ ಬಗ್ಗೆ ತಪ್ಪು ತಿಳಿಯ ಬೇಡಿ. ದೇವೇಗೌಡರಿಗಾಗಿ, ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಪ್ರಜ್ವಲ್ ಮೊದಲ ಗೆಲುವನ್ನು ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ಒಂದೆಡೆ ತಾತಾ ದೇವೇಗೌಡರು ತುಮಕೂರಲ್ಲಿ ಸೋತಿದ್ದಾರೆ. ಮಂಡ್ಯದಲ್ಲಿ ಸಹೋದರ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಅವರ ಸೋಲಿನ ನೋವಲ್ಲಿ ಪ್ರಜ್ವಲ್ ತಮ್ಮ ಗೆಲುವನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ.
ತಾತನಿಗಾಗಿ ಅದೆಂಥಾ ತ್ಯಾಗ ಮಾಡಲು ಹೊರಟಿದ್ದಾರೆ ಗೊತ್ತಾ ಪ್ರಜ್ವಲ್ ರೇವಣ್ಣ?
Date: