ಬೆಂಗಳೂರು: ರೈತರ ಪ್ರತಿಭಟನೆ ಸಂಬಂಧ ಅಮೆರಿಕದ ಪಾಪ್ ಗಾಯಕಿ ರಿಹಾನಾ ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಸೆಲೆಬ್ರಿಟಿಗಳು ಕೂಡ ವಾದ-ವಿವಾದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಬಾಲಿವುಡ್ ನಟಿ ತಾಪ್ಸಿ ಪನ್ನು ಕೂಡ ಒಂದು ಟ್ವೀಟ್ ಮಾಡಿದ್ದು, ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.
ತಾಪ್ಸಿ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸಿಂಹ, ತಾಪ್ಸೀ ಅವರೇ, ಓರ್ವ ರಶ್ದಿ ಭಾರತೀಯ ಮುಸ್ಲಿಮರನ್ನು ಕೆರಳಿಸಿತು. ಒಂದು ವ್ಯಂಗ್ಯಚಿತ್ರವು ಪ್ರಪಂಚದಾದ್ಯಂತ ಮುಸ್ಲಿಮರನ್ನು ಕೆರಳಿಸಿತು. ಒಂದು ಪುಸ್ತಕ (The da Vinci Code) ವಿಶ್ವದೆಲ್ಲೆಡೆ ಕ್ರಿಶ್ಚಿಯನರಲ್ಲಿ ಸಂಚಲನ ಮೂಡಿಸಿತ್ತು. ಅಂತೆಯೇ ಕೇವಲ ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ದಯವಿಟ್ಟು ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್‍ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಉಳಿದ ವಿಚಾರಗಳು ನಿಮ್ಮ ಜ್ಞಾನದ ಹೊರಗಿದೆ ಎಂದು ಹೇಳಿದ್ದಾರೆ.
ತಾಪ್ಸಿ ಹೇಳಿದ್ದೇನು..?
ಒಂದು ಟ್ವೀಟ್ ನಿಮ್ಮ ಒಗ್ಗಟ್ಟನ್ನು ಕೆರಳಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಕೆರಳಿಸುವುದಾದರೆ ಅಥವಾ ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಕೆರಳಿಸುವುದಾದರೆ? ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಪ್ರಾಪಗಾಂಡಾ ಪಾಠ ಮಾಡಲು ಬರಬೇಡಿ’ ಎಂದು ನಟಿ ತಾಪ್ಸಿ ಟ್ವೀಟ್ ಮಾಡಿದ್ದರು.
ತಾಪ್ಸಿ ಅವರು ಮಾಡಿರುವ ಈ ಟ್ವೀಟ್ ಎಲ್ಲೆಡೆ ಭಾರೀ ವೈರಲ್ ಆಗಿದ್ದು, ಪರ- ವಿರೋಧ ಕಾಮೆಂಟ ಗಳು ಬರುತ್ತಿದ್ದವು. ಇದೀಗ ಪ್ರತಾಪ್ ಸಿಂಹ ಅವರು ಅದೇ ಶೈಲಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಟಾಂಗ್ ನೀಡಿದ್ದಾರೆ.