“ಚಿತ್ರದುರ್ಗ ಜಿಲ್ಲೆಯ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಸಿಗದೆ ನಮ್ಮಿಂದ ಅನ್ಯಾಯವಾಗಿದೆ,”ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಿಪ್ಪಾರೆಡ್ಡಿ ಹಿರಿಯ ಶಾಸಕರಿದ್ದಾರೆ, ಏಳೆಂಟು ಬಾರಿ ಗೆದ್ದಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ತಿಪ್ಪಾರೆಡ್ಡಿಗೆ ಮಂತ್ರಿ ಸ್ಥಾನ ನೀಡಲು ಹೇಳುವೆ,” ಎಂದು ತಿಳಿಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಿ.ಎಸ್. ಯಡಿಯೂರಪ್ಪ ಶಾಸಕ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಎರಡು ಕ್ಷೇತ್ರದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ. ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ ಹೆಚ್ಚು ಅಂತರದಿಂದ ಗೆಲ್ಲಬೇಕು ಅನ್ನುವ ಇಚ್ಛೆ ಇದೆ,” ಎಂದು ತಿಳಿಸಿದರು.