ತಿರುಪತಿಯಲ್ಲಿ ಕುಡುಕನ ಹುಚ್ಚಾಟಕ್ಕೆ ದೇವಸ್ಥಾನದ ಸಿಬ್ಬಂದಿ, ಭಕ್ತರು ಕಂಗಾಲು
ತಿರುಪತಿ: ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಗಂಭೀರ ಭದ್ರತಾ ಲೋಪ ಬೆಳಕಿಗೆ ಬಂದಿದ್ದು, ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬನು ದೇಗುಲದ ಕಂಪೌಂಡ್ ಹಾರಿ ಒಳಪ್ರವೇಶಿಸಿ ಗೋಪುರ ಏರಿ ಗಲಾಟೆ ನಡೆಸಿದ್ದಾನೆ. ದೇಗುಲದಲ್ಲಿ ‘ಏಕಾಂತ ಸೇವೆ’ ಪೂರ್ಣಗೊಂಡ ಬಳಿಕ ಈ ಘಟನೆ ಸಂಭವಿಸಿದ್ದು, ಭದ್ರತಾ ಸಿಬ್ಬಂದಿಯ ಗಮನ ತಪ್ಪಿಸಿ ದೇಗುಲ ಆವರಣ ಪ್ರವೇಶಿಸಿದ ಆತ ಏಕಾಏಕಿ ಗೋಪುರ ಏರಿದ್ದಾನೆ. ನಂತರ ಅಲ್ಲಿದ್ದ ಕಳಶಗಳನ್ನು ಎಳೆಯಲು ಯತ್ನಿಸಿದ್ದು, ಇದರಿಂದ ಸಿಬ್ಬಂದಿ ಹಾಗೂ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
ತಕ್ಷಣವೇ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಗೋಪುರದ ಮೇಲಿದ್ದ ವ್ಯಕ್ತಿಯನ್ನು ಕೆಳಗೆ ಇಳಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿದರು.
ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಕೆಳಗಿಳಿಯಲು ನಿರಾಕರಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಮದ್ಯದ ಬಾಟಲ್ ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಅಪಾಯಕರ ಪರಿಸ್ಥಿತಿಯಲ್ಲಿಯೂ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಏಣಿಗಳು ಹಾಗೂ ಹಗ್ಗಗಳ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಕೆಳಕ್ಕೆ ಕರೆತಂದು ವಶಕ್ಕೆ ಪಡೆದರು. ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ವಿವರಗಳನ್ನು ನೀಡಲಾಗುವುದು ಎಂದು ಪೂರ್ವ ಡಿಎಸ್ಪಿ ಭಕ್ತವತ್ಸಲಂ ತಿಳಿಸಿದ್ದಾರೆ.






