ಯಾದಗಿರಿಯಲ್ಲಿ ಕೇಂದ್ರ ಸರ್ಕಾರದ ಜನಾಶೀರ್ವಾದ ಯಾತ್ರೆಯ ವೇಳೆ ಕೇಂದ್ರ ಸಚಿವ ಭಗವಂತ ಖೂಬಾರನ್ನು ನಾಡಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಮಾಡಿರುವ ಬಗ್ಗೆ ರಾಜ್ಯಾದ್ಯಂತ ಟೀಕೆ ವ್ಯಕ್ತವಾಗಿದ್ದರೂ, ಗೃಹ ಸಚಿವ ಆರಗ ಜ್ಞಾನೇಂದ್ರ ಮಾತ್ರ ಗುಂಡು ಹಾರಿಸಿದವರ ಪರ ಬ್ಯಾಟಿಂಗ್ ಮಾಡಿದ್ದಾರೆ.
“ಗಾಳಿಯಲ್ಲಿ ಗುಂಡು ಹಾರಿಸುವುದು ಸಂಪ್ರದಾಯ, ಅದೇ ಸಂಪ್ರದಾಯವನ್ನು ಅಲ್ಲೂ ಪಾಲಿಸಿರಬಹುದು,” ಎಂದು ಮಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಮಂಗಳೂರಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದರ ಬಗ್ಗೆ ಹೇಳಿಕೆ ನೀಡಿದ್ದಾರೆ.
“ಮಲೆನಾಡು, ಕೊಡಗು ಭಾಗದಲ್ಲಿ ತುಂಬಾ ಖುಷಿಯಾದಾಗ, ವಿಜಯೋತ್ಸವ ಆಚರಿಸುವಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಅದೇ ರೀತಿ ಯಾದಗಿರಿಯಲ್ಲೂ ಗುಂಡು ಹಾರಿಸಿರಬಹುದು. ದಸರಾ ಮತ್ತಿತರ ಸಂದರ್ಭದಲ್ಲೂ ಸಂಪ್ರದಾಯದ ಪ್ರಕಾರ ಗಾಳಿಯಲ್ಲಿ ಗುಂಡು ಹಾರಿಸಲಾಗುತ್ತದೆ. ಯಾರದರೂ ಮರಣ ಹೊಂದಿದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೆ ಸಾರ್ವಜನಿಕವಾಗಿ ಗುಂಡು ಹಾರಿಸಿರುವುದು ತಪ್ಪು. ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ. ಅವರು ಮುಂದಿನ ತನಿಖೆ ಮಾಡುತ್ತಾರೆ,” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ