ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಬಹುಭಾಷೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ವಿಚಾರ ಗೊತ್ತಿರುವ ಸಂಗತಿ. ಆದರೆ ಇದುವರೆಗೂ ರಶ್ಮಿಕಾ ಪಾತ್ರ ಏನು ಎನ್ನುವುದು ಎಲ್ಲಿಯೂ ಬಹಿರಂಗವಾಗಿಲ್ಲ. ಅಂತಿಮವಾಗಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಸ್ವತಃ ಚಿತ್ರತಂಡ ಪ್ರಕಟಿಸಿರುವ ಪ್ರಕಾರ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ‘ಶ್ರೀವಲ್ಲಿ’ ಎಂಬ ಯುವತಿ ಪಾತ್ರ ನಿರ್ವಹಿಸಿದ್ದಾರೆ. ಇದುವರೆಗೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ಕೊಡಗಿನ ಕುವರಿ ಬಣ್ಣ ಹಚ್ಚಿದ್ದು, ಶ್ರೀವಲ್ಲಿ ಗೆಟಪ್ ತುಂಬಾ ರಗಡ್ ಆಗಿ ಕಂಡು ಬರುತ್ತಿದೆ.
ಪೋಸ್ಟರ್‌ನಲ್ಲಿ ತಿಳಿಸಿರುವಂತೆ ಈಕೆ ಪುಷ್ಪರಾಜ್ (ಅಲ್ಲು ಅರ್ಜುನ್) ಪ್ರೇಯಸಿ. ಕಿವಿಗೆ ಓಲೆ ಹಾಕಿಕೊಳ್ಳುತ್ತಿರುವ ರಶ್ಮಿಕಾ, ಜತೆಗೆ ತಟ್ಟೆಯಲ್ಲಿ ಹೂವು ಹಾಗೂ ಹೊಸ ಸೀರೆ, ಹರಿಶಿಣ-ಕುಂಕುಮವೂ ಕಾಣುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಯಾವುದೇ ಕಾರ್ಯಕ್ರಮಕ್ಕೆ ರಶ್ಮಿಕಾ ತಯಾರಾಗುತ್ತಿರುವಂತೆ ಭಾಸವಾಗುತ್ತಿದೆ.
ಪುಷ್ಪ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಬಾಕಿ ಉಳಿದಿರುವ ಕೆಲವು ಪ್ರಮುಖ ದೃಶ್ಯಗಳ ಕೆಲಸ ಜರುಗುತ್ತಿದೆ. ಈ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಇದೆ.