ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್: ಹುಬ್ಬಳ್ಳಿಯಲ್ಲಿ ನಡೆದ ಗುಂಡಿನ ದಾಳಿ!
ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ದರೋಡೆಕೋರನ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಂಧಿಸಲು ಹೋದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಮಹೇಶ್ ಸೀತಾರಾಮ್ ಕಾಳೆ ಬಂಧಿತ ವ್ಯಕ್ತಿ ಆಗಿದ್ದಾನೆ. ಇಂದು ಬೆಳಿಗ್ಗೆ ಮಹೇಶ್ ಮತ್ತು ಈತನ ಗ್ಯಾಂಗ್ ಮನೆ ಕಳ್ಳತನಕ್ಕೆ ಇಳಿದಿತ್ತು. ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ಮಹೇಶ್ ಸೀತಾರಾಮ್ನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಉಳಿದವರು ಪರಾರಿಯಾದರು.
ಉಳಿದ ಡಕಾಯಿತರು ಇರುವ ಜಾಗ ತೋರಿಸುತ್ತೇನೆ ಅಂತ ಮಹೇಶ್ ಪೊಲೀಸರನ್ನು ಕರೆದುಕೊಂಡು ಹೋಗಿದ್ದಾನೆ. ಡಕಾಯಿತರು ಇದ್ದ ಸ್ಥಳಕ್ಕೆ ಹೋದ ಬಳಿಕ ಮಹೇಶ್ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ.
ಪ್ರಾಣ ರಕ್ಷಣೆಗಾಗಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್ಐ ಸಚಿನ ದಾಸರೆಡ್ಡಿ ಮಹೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ತಿಂದು ನೋವಿನಿಂದ ಒದ್ದಾಡುತ್ತಿದ್ದ ಮಹೇಶ್ನನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ.