ಬೆಂಗಳೂರು: ವಿಶ್ವ ತಂದೆಯರ ದಿನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ, ದಳಪತಿಗಳಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮದೇ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ತಂದೆ ದೇವೇಗೌಡರ ಜೊತೆಗಿನ ಫೋಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡು ತಂದೆಯ ಗುಣಗಾನ ಮಾಡಿದ್ದಾರೆ. ಇದೇ ವೇಳೆ ದೇವೇಗೌಡರಿಗೆ ಜನ ಅಪ್ಪಾಜಿ ಅಂತ ಯಾಕೆ ಕರೆಯುತ್ತಾರೆ ಅನ್ನೋ ಕುತೂಹಲದ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.
ನಾನು, ನನ್ನ ಒಡಹುಟ್ಟಿದವರು ಬಾಲ್ಯದಲ್ಲಿ ದೇವೇಗೌಡರನ್ನು ನೋಡುತ್ತಿದ್ದದ್ದೇ ಅಪರೂಪ. ಕುಟುಂಬಕ್ಕಿಂತಲೂ ಜನರ ಹಿತ ಅವರಿಗೆ ಮುಖ್ಯವಾಗಿದ್ದರ ಫಲ ಅದು. ಹೀಗಾಗಿಯೇ ಅವರನ್ನು ಬಹುತೇಕರು ಅಭಿಮಾನದಿಂದ ‘ಅಪ್ಪಾಜಿ’ ಎನ್ನುತ್ತಾರೆ. ಅದು ದೇವೇಗೌಡರು ಜನರಿಂದ ಗಳಿಸಿದ ಪದವಿ. ಇಂದು ತಂದೆಯ ದಿನ ಹಾಗಾಗಿಯೇ ಇದನ್ನು ಹೇಳಬೇಕಾಯ್ತು ಎಂದು ತಮ್ಮ ಮನದ ಭಾವನೆ ಹಂಚಿಕೊಂಡಿದ್ದಾರೆ.
ಅದೇ ರೀತಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ತಂದೆ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಬಿಡಿದಯ ತೋಟದ ಮನೆಯಲ್ಲಿ ಕುಮಾರಸ್ವಾಮಿ ನಿಖಿಲ್ ಹೆಗಲ ಮೇಲೆ ಕೈ ಹಾಕಿಕೊಂಡಿರುವ ಅಪರೂಪದ ಫೋಟೋ ಹಾಕಿ ಅಪ್ಪಂದಿರ ದಿನದ ಶುಭಾಶಯ ಕೋರಿದ್ದಾರೆ.
ವಿಜಯೇಂದ್ರರಿಂದಲೂ ಶುಭಾಶಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಸಹ ಅಪ್ಪಂದಿರ ದಿನದ ಶುಭಾಶಯ ಕೋರಿದ್ದಾರೆ. ತಂದೆ ಯಡಿಯೂರಪ್ಪ ಕಾಲಿಗೆ ನಮಸ್ಕಾರ ಮಾಡಿರುವ ಫೋಟೋವನ್ನು ಹಾಕಿ ತಂದೆ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ. ಮಾತೃ ದೇವೋ ಭವ, ಪಿತೃ ದೇವೋ ಭವ. ತಾಯಿ ಮಡಿಲಿನ ಲಾಲನೆಗೆ ತಂದೆ ಆಸರೆ ನೆರಳಾಗಿ ಪೋಷಣೆಯ ವೃಕ್ಷವಾಗಿ ಕರುಳ ಬಳ್ಳಿಯ ಸನ್ಮಾರ್ಗದ ಸಾಧನೆಗೆ ಗುರುವಾಗಿ ನಿಲ್ಲುವ ಮಾತೃ ಹೃದಯದ ತ್ಯಾಗಜೀವಿ ಎಂದು ಶುಭ ಕೋರಿದ್ದಾರೆ.