ಪ್ರತಿ ವರ್ಷದಂತೆ ಈ ಬಾರಿಯೂ ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆ ಸಿಬ್ಬಂದಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಪಹಾರದ ವ್ಯವಸ್ಥೆ ಮಾಡಿಸಿದ್ದರು.
ಅರಮನೆ ಅಂಗಳದಲ್ಲಿ ದಸರಾ ಗಜಪಡೆ ಮಾವುತರು ಮತ್ತು ಕಾವಾಡಿಗರಿಗೆ ಉಪಾಹಾರ ಕೂಟ ಏರ್ಪಡಿಸಿ ಮಾತನಾಡಿದ ಸಚಿವ ಶೋಭಾ ಕರಂದ್ಲಾಜೆ, “2008ರಲ್ಲಿ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದಾಗ ದಸರಾ ಸಂದರ್ಭದಲ್ಲಿ ಎಲ್ಲ ಮಾವುತರು, ಕಾವಾಡಿಗರಿಗೆ ಉಪಾಹಾರ ನೀಡುವುದನ್ನು ಆರಂಭಿಸಿದ್ದೆವು. ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ,” ಎಂದರು.
“ಮಾವುತರು, ಕಾವಾಡಿಗರು ಮೈಸೂರು ನಗರಕ್ಕೆ ಬರುವುದು ವರ್ಷಕ್ಕೆ ಒಮ್ಮೆಯಷ್ಟೆ. ಹಿಂದೆ ಅವರಿಗೆ ಗೌರವಧನವಾಗಿ ಕೇವಲ 5,000 ರೂ. ನೀಡಲಾಗುತ್ತಿತ್ತು. ಉಳಿದಂತೆ ಅವರು ಕಾಡಿನಲ್ಲಿ ಕೂಲಿ ಇನ್ನಿತರ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಅವರನ್ನು ಸರ್ಕಾರಿ ನೌಕರರು ಎಂದೇ ಪರಿಗಣಿಸಿ, ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿದೆ. ಅವರ ಮಕ್ಕಳಿಗೆ ಶಿಕ್ಷಣ ಕೊಡುವಂತೆ ಪ್ರೇರೇಪಿಸಲಾಗುತ್ತಿದೆ,” ಎಂದು ತಿಳಿಸಿದರು.
“ಮಾವುತರು, ಕಾವಾಡಿಗರೊಂದಿಗೆ ಕಾಲ ಕಳೆಯುವುದೆಂದರೆ ನನಗೆ ಆನಂದ. ಹೀಗಾಗಿ, ಅವರೊಟ್ಟಿಗೆ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದು ಖುಷಿ ಎನಿಸಿದೆ,” ಎಂದು ಕೇಂದ್ರ ಸಚಿವೆ ಸಂತಸ ವ್ಯಕ್ತಪಡಿಸಿದರು.