ದಸರಾ ಸಂಭ್ರಮಕ್ಕೆ ಬ್ರೇಕ್ ಹಾಕಿದ ಕೊರೊನಾ

1
34

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡು ವರ್ಷಗಳ ಹಿಂದೆ ದಸರಾ ಎಂದರೆ ಸಾಕು ಇಡೀ ನಗರ ಸಡಗರ ಸಂಭ್ರಮದಲ್ಲಿ ಮಿಂದೇಳುತ್ತಿತ್ತು. ಎಲ್ಲೆಂದರಲ್ಲಿ ದಸರಾ ಹಬ್ಬದ ಕಳೆ ತುಂಬಿ ತುಳುಕುತ್ತಿತ್ತು.

ಸರ್ಕಾರ ಒಂದೆಡೆ ದಸರಾಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸಂಘ- ಸಂಸ್ಥೆಗಳು ಕೂಡ ಖಾಸಗಿಯಾಗಿ ಹತ್ತು ಹಲವು ಕಾರ್ಯಕ್ರಮ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ದಸರಾ ವೈಭವ ಮೇಳೈಸುವಂತೆ ಮಾಡುತ್ತಿದ್ದರು. ಆಗ ಮನೆಗಳಿಂದ ಆರಂಭವಾಗಿ ನಗರದವರೆಗೆ ದಸರಾ ಸಡಗರ ಎದ್ದು ಕಾಣುತ್ತಿತ್ತು. ಆದರೆ ಕಳೆದೆರಡು ವರ್ಷದಿಂದ ದಸರಾ ಸಂಭ್ರಮಕ್ಕೆ ತುಕ್ಕು ಹಿಡಿದಿದೆ, ಪರಿಣಾಮ ಸಂಭ್ರಮ ಮರೆಯಾಗಿದೆ.

 

ವಿಶ್ವವಿಖ್ಯಾತ ಮೈಸೂರು ದಸರಾದ ಮೇಲೆ ಬಿದ್ದಿರುವ ಕೊರೊನಾ ಕರಿನೆರಳು ಲಕ್ಷಾಂತರ ಮಂದಿಯ ಅನ್ನವನ್ನು ಕಿತ್ತುಕೊಳ್ಳುವ ಮೂಲಕ ದಸರಾ ಸಂಭ್ರಮಕ್ಕೆ ತಣ್ಣೀರು ಎರಚಿರುವುದಲ್ಲದೆ, ವ್ಯಾಪಾರ ವಹಿವಾಟುಗಳನ್ನು ಕಿತ್ತುಕೊಂಡು ಬದುಕನ್ನೇ ಮೂರಾಬಟ್ಟೆ ಮಾಡಿದೆ. ಹಿಂದೆ ದಸರಾ ಬಂದರೆ ಸಾಕು ಪ್ರವಾಸೋದ್ಯಮ ಗರಿಬಿಚ್ಚುತ್ತಿತ್ತು. ಜನ ತಮ್ಮ ಬದುಕನ್ನು ಬೇರೆ ಬೇರೆ ರೀತಿಯಲ್ಲಿ ಕಟ್ಟಿಕೊಳ್ಳುತ್ತಿದ್ದರು. ಮೈಸೂರು ನಗರ ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆದರೆ ಈಗ ಎಲ್ಲೆಡೆಯೂ ಸೂತಕದ ವಾತಾವರಣ ಕಂಡು ಬರುತ್ತಿದೆ.

 

ಹಾಗೆ ನೋಡಿದರೆ ಅರಮನೆ ನಗರಿಯ ಬಹಳಷ್ಟು ಮಂದಿ ದೂರದಿಂದ ಬರುವ ಪ್ರವಾಸಿಗರನ್ನು ನಂಬಿ ಬದುಕುತ್ತಿದ್ದಾರೆ. ಅದರಲ್ಲೂ ಇಲ್ಲಿ ಟಾಂಗಾ ಓಡಿಸಿ ಬದುಕುವ ಟಾಂಗಾ ವಾಲಗಳ ಬದುಕು ಪ್ರವಾಸಿಗರು ಬಂದರೆ ಮಾತ್ರ ನಡೆಯುತ್ತದೆ. ಹೀಗಾಗಿ ಪ್ರವಾಸಿಗರು ಮೊದಲಿನಂತೆ ಬರುತ್ತಿಲ್ಲ. ಬಂದರೂ ಟಾಂಗಾದಲ್ಲಿ ಸಂಚರಿಸುವ ಮನಸ್ಸು ಮಾಡುತ್ತಿಲ್ಲ. ಮೊದಲೆಲ್ಲ ದಸರಾ ಅಂದರೆ ನೂರಾರು ಕಾರ್ಯಕ್ರಮಗಳು ನಡೆಯುತ್ತಿದ್ದವು. ಹೀಗಾಗಿ ಎಲ್ಲ ಬಗೆಯ ವ್ಯಾಪಾರ ಮಾಡುವವರಿಗೆ ಅನುಕೂಲವಾಗುತ್ತಿತ್ತು. ವ್ಯಾಪಾರ ವಹಿವಾಟುಗಳು ಸುಗಮವಾಗಿ ನಡೆಯುತ್ತಿದ್ದವು. ಆದರೆ ಈಗ ಯಾವುದೂ ಕಾಣುತ್ತಿಲ್ಲ.

ಈ ಬಾರಿಯೂ ಸರಳ ದಸರಾ ಮಾಡುತ್ತಿರುವ ಕಾರಣ ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿ, ಒಂದಷ್ಟು ಅತಿಥಿಗಳಷ್ಟೆ ಭವ್ಯ ಮೆರವಣಿಗೆಗೆ ಸಾಕ್ಷಿಯಾಗುತ್ತಿದ್ದಾರೆ. ಉಳಿದಂತೆ ಸಂಪ್ರದಾಯಬದ್ಧವಾಗಿ ಆಚರಣೆಗಳು ನಡೆಯುತ್ತವೆಯಾದರೂ ಸಾರ್ವಜನಿಕರಿಗೆ ಎಲ್ಲಿಯೂ ಪ್ರವೇಶವಿರುವುದಿಲ್ಲ. ಜನ ಸೇರಿದರಷ್ಟೆ ದಸರಾ, ಆದರೆ ಕೊರೊನಾ ಜನ ಸೇರಿದಷ್ಟು ಜಾಸ್ತಿ ಕಾಡುವುದರಿಂದ ಗುಂಪಾಗಿ ಸೇರುವಂತಿಲ್ಲ. ಆದಷ್ಟು ಸಾಮಾಜಿಕ ಅಂತರ ಕಾಪಾಡುವುದು ಅನಿವಾರ್ಯವಾಗಿದೆ. ಅರಮನೆಗಷ್ಟೆ ಜಂಬೂ ಸವಾರಿಯನ್ನು ಸೀಮಿತ ಮಾಡಿದೆ. ಗಣ್ಯರಿಗೆ ಅದರಲ್ಲೂ ಕೇವಲ 300 ಮಂದಿ ಮತ್ತು 50 ಕಾರ್ಯಕ್ರಮಗಳಿಗಷ್ಟೆ ಅವಕಾಶ ನೀಡಲಾಗಿದೆ. ಮೈಸೂರು ದಸರಾಕ್ಕೆ ಕಳೆ ಕಟ್ಟುವುದು ದೀಪಾಲಂಕಾರ. ಈ ದೀಪಾಲಂಕಾರ ಈ ಬಾರಿಯೂ ಇರಲಿದೆ. ಅರಮನೆ ಆವರಣದಲ್ಲಿ ಒಂಬತ್ತು ದಿನಗಳ ಕಾರ್ಯಕ್ರಮವೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯಲಿದೆ.

1 COMMENT

LEAVE A REPLY

Please enter your comment!
Please enter your name here