ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನಗಳಿನಿಂದ ನಡೆಯುತ್ತಿದ್ದ ದಸರಾ ಸಂಭ್ರಮ ಇಂದು ಅಧಿಕೃತವಾಗಿ ಮುಕ್ತಾಯಗೊಳ್ಳುತ್ತಿದೆ. ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.
ಮಧ್ಯಾಹ್ನ 1 ಗಂಟೆಗೆ ಶುಭ ಧನುರ್ ಲಗ್ನದಲ್ಲಿ, ಮೈಸೂರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಂದಿ ಧ್ವಜ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಸಿಎಂ ಈಡುಗಾಯಿ ಒಡೆದರು. ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲವಾದರೂ, ಮೂರನೇ ಬಾರಿ ಈಡುಗಾಯಿ ಒಡೆಯುವಲ್ಲಿ ಯಶಸ್ವಿಯಾದರು.
ಪೂಜೆಯ ನಂತರ ಮಾತನಾಡಿದ ಸಿಎಂ, “ವಿಶ್ವವಿಖ್ಯಾತ ಜಂಬೂ ಸವಾರಿ ಇಂದು ನಡೆಯಲಿದೆ. ನಂದಿ ಧ್ವಜ ಪೂಜೆ ಈಗಾಗಲೇ ನೆರವೆರಿಸಲಾಗಿದೆ. ಎಲ್ಲಾ ಪ್ರವಾಸಿಗರಿಗೆ ಮನಃಪೂರ್ವಕ ಸ್ವಾಗತ. ಸಿಎಂ ಆಗಿ ನಾನು ಎಂಟು ಸಲ ದಸರಾ ಆಚರಣೆಗಾಗಿ ಬಂದಿದ್ದೇನೆ. ಇದು ಜನರ ಆಶೀರ್ವಾದದಿಂದ ಸಾಧ್ಯವಾಗಿದೆ. ರಾಜ್ಯದ ಜನರು ಖುಷಿಯಾಗಿದ್ದರೆ, ಸರ್ಕಾರವೂ ಖುಷಿಯಾಗಿರುತ್ತದೆ” ಎಂದರು.