ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಫಾರ್ಮ್ನಲ್ಲಿದ್ದಾರೆ. ವಿಶ್ವಕಪ್ನಲ್ಲಿ ರೋಹಿತ್ ಆರ್ಭಟಕ್ಕೆ ಎದುರಾಳಿಗಳು ಗಡಗಡ ಅಂತಿದ್ದಾರೆ. ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದ ರೋಹಿತ್ ಇಂದು ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಅದ್ಭುತ ಸೆಂಚುರಿ ಬಾರಿಸಿದ್ದಾರೆ.
ರೋಹಿತ್ ಈ ಶತಕದೊಂದಿಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್ ಈ ವಿಶ್ವಕಪ್ನಲ್ಲಿ ಸಿಡಿಸಿದ 4ನೇ ಶತಕ ಇದಾಗಿದೆ. ಒಂದೇ ವಿಶ್ವಕಪ್ನಲ್ಲಿ 4 ಶತಕ ಬಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 2ನೇ ಆಟಗಾರರ ಎಂಬ ದಾಖಲೆ ರೋಹಿತ್ ಅವರದ್ದಾಗಿದೆ.
ಬಂಗಾಳದ ಹುಲಿ ಸೌರವ್ ಗಂಗೂಲಿ 2003ರ ವಿಶ್ವಕಪ್ನಲ್ಲಿ 3 ಶತಕ ಹೊಡೆದಿದ್ದರು. ಈ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ 2015ರ ವಿಶ್ವಕಪ್ನಲ್ಲಿ 4 ಶತಕ ಬಾರಿಸಿದ್ದರು. ಈ ಬಾರಿ ರೋಹಿತ್ ಕೂಡ 4 ಶಕತ ಗಳಿಸಿದ್ದಾರೆ. ಇನ್ನೂ ಕೂಡ ವಿಶ್ವಕಪ್ ನಲ್ಲಿ ಭಾರತದ ಪಂದ್ಯಗಳಿರುವುದರಿಂದ ಕನಿಷ್ಠ ಒಂದಾದರೂ ಶತಕ ಸಿಡಿಸುವ ಸಾಧ್ಯತೆ ಇದ್ದು, ಸಂಗಕ್ಕಾರ ದಾಖಲೆಯನ್ನೂ ಸಹ ಪುಡಿಗಟ್ಟುವ ನಿರೀಕ್ಷೆ ಇದೆ.
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 3ನೇ ವಿಶ್ವಕಪ್ ಅನ್ನು ಗೆದ್ದು ತರುವ ವಿಶ್ವಾಸದಲ್ಲಿದೆ. ಉತ್ತಮ ಆಟ ಪ್ರದರ್ಶಿಸುತ್ತಿದೆ. ಇಡೀ ಭಾರತ ವಿಶ್ವಕಪ್ ತರುವುದನ್ನು ಎದುರು ನೋಡುತ್ತಿದೆ.