ಸೋಮವಾರ ಸಂಜೆ ರಾಜಾಸ್ಥಾನ್ ನ ಬಾರ್ಮೇರ್ ನ ಭೂಖಾ ಭಗತ್ ಸಿಂಗ್ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್ ಗೆ ಬೊಲೆರೊ ಎಸ್ ಯುವಿ ಡಿಕ್ಕಿ ಹೊಡೆದ ಪರಿಣಾಮ ಗುಜರಾತ್ ನ ಒಂದು ಕುಟುಂಬದ ನಾಲ್ವರು ಸಾವನ್ನಪ್ಪಿದ್ದರೆ, ಐವರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಬನಸ್ಕಾಂತದ ದೀಸಾದ ಲಾವಣಾ ಮತ್ತು ಲಕ್ಷ್ಮೀಪುರ ಗ್ರಾಮಗಳ ಒಂದು ಕುಟುಂಬದ 11 ಸದಸ್ಯರು ಬಾರ್ಮರ್‌ನ ಮಜಿಸಾ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರನ್ನು ಚೈನಾಭಾಯಿ ಸುತಾರ್, ಪತ್ನಿ ಗೋಮತಿ ಸುತಾರ್, ಭಾವನಾ ಸುತಾರ್ ಮತ್ತು ಕನಾಭಾಯ್ ಸುತಾರ್ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ 17 ವರ್ಷದ ಹುಡುಗಿ ಸೇರಿದಂತೆ ಇನ್ನೂ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಗಾಯಗೊಂಡ ಐವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸಾವಿಗೆ ಕಾರಣವಾದ ಆತನ ವಿರುದ್ಧ ನಾವು ಐಪಿಸಿ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ನಾಲ್ಕು ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೀಸಾದಿಂದ ಬಂದ ಸಂಬಂಧಿಕರಿಗೆ ನಾವು ಇಂದು ಬೆಳಿಗ್ಗೆ ಶವಗಳನ್ನು ಹಸ್ತಾಂತರಿಸಿದೆವು. ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ “ಎಂದು ಸಿಂಧಾರಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಬಲದೇವ್ ರಾಮ್ ಮಾಧ್ಯಮಗಳಿಗೆ ತಿಳಿಸಿದರು.