ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಶಾಸಕರುಗಳ ಸಮಸ್ಯೆಗಳಿಗೆ ಸ್ಪಂದನೆ ನೀಡದಿರುವುದೇ ಪ್ರಮುಖ ಕಾರಣ ಎಂದು ಹೇಳಿದ್ದ ಸಿದ್ದರಾಮಯ್ಯ, ಇದರ ಜೊತೆಗೆ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಕುಮಾರಸ್ವಾಮಿ, ರೇವಣ್ಣ ಹಾಗೂ ಹೆಚ್.ಡಿ. ದೇವೇಗೌಡರ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದೇ ಕಾರಣ ಎಂದು ಹೇಳಿದ್ದಾರೆ.
ಇದಾದ ಬಳಿಕ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದು, ಅದರಲ್ಲೂ ಪ್ರಮುಖವಾಗಿ ಒಂದು ಕಾಲದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಪರಮಾಪ್ತರಾಗಿದ್ದ ಜಮೀರ್ ಅಹ್ಮದ್ ಹಾಗೂ ಚೆಲುವರಾಯಸ್ವಾಮಿ ಮುಂಚೂಣಿಯಲ್ಲಿದ್ದರೆಂಬುದು ಕುತೂಹಲಕ್ಕೆ ಕಾರಣವಾಗಿದೆ.ದೇವೇಗೌಡರ ವಿರುದ್ಧ ಸಿದ್ದರಾಮಯ್ಯನವರ ಮಾಡಿದ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಕುಮಾರಸ್ವಾಮಿಯವರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ