ದೇಶದಲ್ಲಿ ಜಾತಿ ಗಣತಿ ಮಾಡಲು ಆಗಿಲ್ಲವೆಂದು ಕಾಂಗ್ರೆಸ್ ಕ್ಷಮೆ ಕೋರಲಿ: ಆರ್.ಅಶೋಕ್
ಬೆಂಗಳೂರು: ದೇಶದಲ್ಲಿ ಜಾತಿ ಗಣತಿ ಮಾಡಲು ಆಗಿಲ್ಲವೆಂದು ಕಾಂಗ್ರೆಸ್ ಕ್ಷಮೆ ಕೋರಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. 2015 ರಲ್ಲಿ ಜಾತಿ ಗಣತಿ ಮಾಡಿ ಹತ್ತು ವರ್ಷಗಳ ನಂತರ ಅದನ್ನು ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಕಾಂಗ್ರೆಸ್ ಮೊದಲು ಯೋಚಿಸಬೇಕು. ದೇಶದಲ್ಲಿ ಜಾತಿ ಗಣತಿ ಮಾಡಲು ಆಗಿಲ್ಲವೆಂದು ಕಾಂಗ್ರೆಸ್ ಕ್ಷಮೆ ಕೋರಲಿ. ಯಾಕೆ ಮಾಡಿಲ್ಲವೆಂದು ಸಿಎಂ ಸಿದ್ದರಾಮಯ್ಯನವರೇ ತಿಳಿಸಲಿ ಎಂದು ಸವಾಲು ಹಾಕಿದರು.
ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇಲ್ಲ. 150 ಕೋಟಿ ರೂ. ಖರ್ಚಿನಲ್ಲಿ ಮಾಡಿದ ರಾಜ್ಯದ ಜಾತಿ ಗಣತಿ ವರದಿ ಏನಾಗಲಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಸಮೀಕ್ಷೆಯ ವೇಳೆ ಯಾರೂ ಯಾರ ಮನೆಗೂ ಹೋಗಿಲ್ಲ ಎಂದು ಸ್ವಾಮೀಜಿಗಳೇ ಹೇಳುತ್ತಿದ್ದಾರೆ. ಈ ಸಮೀಕ್ಷೆಯ ಗತಿ ಏನು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಬೇಕು.
ರಾಜ್ಯದ ಜಾತಿ ಗಣತಿ ವರದಿ ವಿರೋಧಿಸಿ ಎಲ್ಲ ಸಮುದಾಯಗಳು ಪ್ರತಿಭಟನೆ ಮಾಡುತ್ತಿವೆ. ಕೆಲವು ಸಮುದಾಯದವರು ತಾವೇ ಸ್ವತಃ ಹೊಸ ಸಮೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಸಚಿವರು ಕೂಡ ಇದನ್ನು ವಿರೋಧಿಸಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಈ ವರದಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.