ಹಸು, ಎಮ್ಮೆ, ಮೇಕೆ ಹಾಲಿನ ಡೈರಿ ಈಗ ಎಲ್ಲೆಲ್ಲೂ ಇದೆ. ಆದರೆ ಇದರ ಜೊತೆಗೆ ಕತ್ತೆ ಹಾಲಿನ ಡೈರಿಯೂ ಆರಂಭವಾಗಲಿದೆ. ಮೊದಲ ಬಾರಿ ಶೀಘ್ರದಲ್ಲೇ ಕತ್ತೆ ಹಾಲಿನ ಡೈರಿ ಕೂಡ ದೇಶದಲ್ಲಿ ಕಾರ್ಯವನ್ನು ಶುರುಮಾಡಲಿದೆ.
ಹೌದು, ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಇ) ಶೀಘ್ರದಲ್ಲೇ ಹರಿಯಾಣದ ಹಿಸಾರ್‌ನಲ್ಲಿ ಕತ್ತೆ ಹಾಲಿನ ಡೈರಿಯನ್ನು ಪ್ರಾರಂಭಿಸಲಿದೆ. ಹಲಾರಿ ತಳಿ ಕತ್ತೆ ಸೇರಿದಂತೆ ವಿವಿಧ ತಳಿಗಳ ಕತ್ತೆಗಳ ಹಾಲನ್ನು ಇಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.
ಹಾಲಾರಿ ತಳಿ ಕತ್ತೆಯ ಹಾಲರಿ ನೀಡಿದ ಹಾಲಿನ ದಿನಚರಿಯನ್ನು ತೆರೆಯಲು ಹಿಸಾರ್‌ನಲ್ಲಿರುವ ಎನ್‌ಆರ್‌ಸಿಇ ಸಿದ್ಧವಾಗಿದೆ. ಮತ್ತು ಎನ್‌ಆರ್‌ಸಿಇ ಹಿಸಾರ್ ಈಗಾಗಲೇ 10 ಹಲಾರಿ ತಳಿ ಕತ್ತೆಗಳಿಗೆ ಈ ಉದ್ದೇಶಕ್ಕಾಗಿ ಆದೇಶಿಸಿದ್ದು, ಈ ಕತ್ತೆಗಳು ಪ್ರಸ್ತುತ ಎನ್‌ಆರ್‌ಸಿಇ ಹಿಸಾರ್‌ನಲ್ಲಿ ಸಂತಾನೋತ್ಪತ್ತಿಗೆ ಒಳಗಾಗುತ್ತಿವೆ ಎಂದು ತಿಳಿದುಬಂದಿದೆ.
ಕತ್ತೆ ಹಾಲಿನ ಡೈರಿನಾ ಎಂದು ಮೂಗು ಮುರಿಯಬೇಡಿ. ಏಕೆಂದರೆ ಇದರ ಪ್ರಯೋಜನ ಕೇಳಿದರೆ, ಎಷ್ಟು ದೂರವಾದರೂ ಸರಿ, ಖರೀದಿಸಲು ಮುಂದಾಗುವಿರಿ. ಅಷ್ಟೇ ಏಕೆ, ನಗರ ಪ್ರದೇಶದಲ್ಲಿ
ಕತ್ತೆ ಹಾಲು ಸಿಗದೇ ಪರದಾಡುತ್ತಿರುವವರೂ ಎಷ್ಟೋ ಮಂದಿ. ಇನ್ನೂ ದೂರದ ಊರಿಂದ ನಗರ ಪ್ರದೇಶಗಳಿಗೆ ಕತ್ತೆಗಳನ್ನು ತಂದು ಬೀದಿ ಬೀದಿ ಸುತ್ತಾಡಿ ಹಾಲು ಮಾರಾಟ ಮಾಡಿ ಬದುಕು ಕಟ್ಟುಕೊಂಡಿದ್ದಾರೆ.
ಕತ್ತೆಯ ಹಾಲು ಮನುಷ್ಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹಲವು ಮಂದಿ ನಂಬಿದ್ದಾರೆ ಕೂಡ.
ಹಸು, ಎಮ್ಮೆಯ ಹಾಲುಗಳಲ್ಲಿ ಒಂದೆರಡು ರೂಪಾಯಿ ಹೆಚ್ಚಾದರೂ ಕ್ಯಾತೆ ತೆಗೆಯುವವರೇ ಬಹುತೇಕರು. ಆದರೆ ಕತ್ತೆಯ ಒಂದು ಲೀಟರ್ ಹಾಲಿನ ಬೆಲೆ ಕೇಳಿದರೆ ನೀವು ಶಾಕ್ ಆಗುತ್ತೀರಾ. ಒಂದು ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 7000 ರೂಪಾಯಿವರೆಗೂ ಇದೆ.
ಹೌದು. ನೀವು ಓದುತ್ತಿರುವುದು ನಿಜ. ನೂರು ಇನ್ನೂರು, ಸಾವಿರ ಅಲ್ಲ… ಏಳು ಸಾವಿರ ರೂಪಾಯಿಗಳವರೆಗೂ ಪ್ರತಿ ಲೀಟರ್‌ಗೆ ಹಾಲಿನ ಬೆಲೆ ಇದೆ.
ಸಾಮಾನ್ಯ ಕತ್ತೆಯ ಹಾಲಿಗಾದರೆ ಆರಂಭವಾಗುವುದೇ ಎರಡು ಸಾವಿರ ರೂಪಾಯಿ ಲೀಟರ್‌ನಿಂದ. ಹೌದು, ಕತ್ತೆಯ ತಳಿಗಳ ಆಧಾರದ ಮೇಲೆ ಹಾಲಿನ ದರವು ಏಳು ಸಾವಿರ ರೂಪಾಯಿವರೆಗೂ ಇದೆ.
ಅಬ್ಬಬ್ಬಾ! ಇದ್ಯಾಕೆ ಇಷ್ಟು ರೇಟು ಎಂದುಕೊಳ್ಳುವಿರಾ? ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಬಹುತೇಕ ಆರೋಗ್ಯ ಸಮಸ್ಯೆಗಳನ್ನು, ಅನೇಕ ರೋಗಗಳನ್ನು ದೂರ ಮಾಡುವ ಶಕ್ತಿ ಕತ್ತೆ ಹಾಲಿನಲ್ಲಿದೆ.
ಹಲಾರಿ ತಳಿಯ ಕತ್ತೆಯ ಹಾಲು ಕ್ಯಾನ್ಸರ್, ಬೊಜ್ಜು, ಅಲರ್ಜಿ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಹಾಲುಗಳಿಂದ ಶಿಶುಗಳಿಗೆ ಅಲರ್ಜಿಯಾಗುವುದು ಉಂಟು. ಆದರೆ ಕತ್ತೆಯ ಹಲಾರಿ ತಳಿಯ ಹಾಲು ಮಕ್ಕಳಿಗೆ ಅಮೃತ. ಆ್ಯಂಟಿ ಆಕ್ಸಿಡೆಂಟ್, ಆಂಟಿಜೇಜಿಂಗ್ ಅಂಶಗಳು ಕತ್ತೆ ಹಾಲಿನಲ್ಲಿ ಕಂಡುಬರುತ್ತವೆ.
ಇನ್ನು ಹಲಾರಿ ತಳಿಯ ಕತ್ತೆಯ ಬಗ್ಗೆ ಹೇಳುವುದಾದರೆ ಇವು ಗುಜರಾತ್‌ನಲ್ಲಿ ಕಂಡುಬರುತ್ತದೆ. ಇವುಗಳ ಹಾಲನ್ನು ಔಷಧಿಗಳ ನಿಧಿ ಎಂದು ಪರಿಗಣಿಸಲಾಗುತ್ತದೆ. ಕತ್ತೆ ಹಾಲಿನಿಂದ ತಯಾರಿಸಿದ ಸೌಂದರ್ಯ ಉತ್ಪನ್ನಗಳು ಸಾಕಷ್ಟು ದುಬಾರಿಯಾಗಿದೆ. ಸಾಬೂನು, ಲಿಪ್ ಬಾಮ್, ಬಾಡಿ ಲೋಷನ್ ಇತ್ಯಾದಿಗಳನ್ನು ತಯಾರಿಸಲು ಕತ್ತೆ ಹಾಲನ್ನು ಬಳಸಲಾಗುತ್ತದೆ. ಇಂಥ ಕತ್ತೆಯ ಹಾಲಿನ ಡೈರಿ ಶುರು ಮಾಡಲಾಗುತ್ತಿದೆ.