ಶ್ರೀ ಕೃಷ್ಣ ಜನ್ಮಾಷ್ಟಮಿ ‌ಮಹತ್ವವೇನು.. ಆಚರಿಸುವ ಬಗೆ ಹೇಗೆ..?

0
276

ಭಗವಾನ್ ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೆ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ ಶ್ರೀಕೃಷ್ಣ. ಗೋವುಗಳನ್ನೂ, ಗೋಪಾಲಕರನ್ನೂ, ಪಶು, ಪಕ್ಷಿ, ವೃಕ್ಷ, ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ. ಮಹಾಭಾರತದ ಸೂತ್ರಧಾರ, ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ. ಇಂದು ಶ್ರೀಕೃಷ್ಣ ಜನ್ಮಾಷ್ಠಮಿ.

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮ‌ದೇ ರೀತಿಯಲ್ಲಿ ಗೋಪಾಲನನ್ನು ಆರಾಧಿಸುವರು, ಪೂಜಿಸುವರು. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಜನ್ಮಾಷ್ಟಮಿಯೆಂದೂ ಕರೆಯುವರು.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ. ಮಥುರೆಯ ತಾಯಿ ಮತ್ತು ತಂದೆ ಸೆರೆಮನೆಯಲ್ಲಿರುವಾಗ ಅಲ್ಲಿ ಹುಟ್ಟಿದ ವಸುದೇವ-ದೇವಕಿ ಕುಟುಂಬದ ಎಂಟನೆಯ ಮಗು ವಾಸುದೇವನಾಗಿ
ಹುಟ್ಟುತ್ತಾನೆ ಶ್ರೀಮನ್ನಾರಾಯಣ.
ಬಳಿಕ ಗೋಕುಲದಲ್ಲಿ ಕೃಷ್ಣನಾಗಿ‌ ಯಶೋಧೆಯ ಮುದ್ದು ಪೋರನಾಗಿ ಬೆಳೆಯುತ್ತಾನೆ ರಾಧಾಕೃಷ್ಣ.

ಅಕ್ಕ ಪಕ್ಕದ ಮನೆಯಲ್ಲಿಹ ಬೆಣ್ಣೆ ಕದ್ದು ತಿಂದು, ತುಂಟತನದಲ್ಲಿ ಮಕ್ಕಳಿಗೆ ಗುರುವಾಗಿದ್ದ ಬೆಣ್ಣೆಚೋರ. ಅಷ್ಟಲ್ಲದೇ ಬಾಯಲ್ಲಿ ಮಣ್ಣು ಹಾಕಿಕೊಂಡು ತನ್ನ ತಾಯಿಗೆ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವರೂಪಿ. ಜಾಂಬವಂತನಿಂದ ಸ್ಯಮಂತಕಮಣಿಯನ್ನು ಪಡೆದ ದೈವರೂಪಿ. ವಾಸುಕಿ ಎಂಬ ಕಾಳಸರ್ಪವನ್ನು ಸಂಹರಿಸಿ ಜನಗಳನ್ನು ಸಂರಕ್ಷಿಸಿದವನು.

ಬಲರಾಮನ ತಮ್ಮ ಮತ್ತು ಕುಚೇಲನ ಆಪ್ತ ಮಿತ್ರ ಈ ಗೋಪಿನಂದನ. ಕೃಷ್ಣನಿಗೆ ಅವಲಕ್ಕಿ ಬಹು ಪ್ರಿಯವಾದ ತಿನಿಸು. ಮಹಾಭಾರತ ಕಾಳಗದಲ್ಲಿ ಕಪಟೋಪಾಯವನ್ನು ಬೋಧಿಸಿ, ಶತ್ರು ಸಂಹಾರದ ವೈವಿಧ್ಯವನ್ನು ಪರಿಚಯಿಸಿದ ಕಪಟಸೂತ್ರಧಾರಿ. ನರಕಾಸುರನನ್ನು ಸಂಹರಿಸಿ ಸಾವಿರಾರು ರಾಜರುಗಳನ್ನೂ, ಹದಿನಾರು ಸಾವಿರ ಸ್ತ್ರೀಯರನ್ನೂ ಬಿಡುಗಡೆಗೊಳಿಸಿದ ಮಹಾ ಪರಾಕ್ರಮಿ.

ತನ್ನ ಬಾಲ ಲೀಲೆಗಳಿಂದಲೇ ಭಕ್ತರ ಮನತಣಿಸಿದ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಎಲ್ಲೆಡೆಯೂ ಸಂಭ್ರಮದಿಂದ ಆಚರಿಸಲಾಗುತ್ತದೆ. ‌

  • ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ, ಅಂದು ಸ್ತ್ರೀಯು ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು. ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಹೇಳಿದೆ.

ಕೃಷ್ಣ ಜನ್ಮಾಷ್ಟಮಿ ಆಚರಣೆ ಹೇಗೆ?

ಬೆಳಗಿನಿಂದ ಸಂಜೆಯವರೆವಿಗೆ ಉಪವಾಸವಿದ್ದು, ಭಕ್ತಿ ಶ್ರದ್ಧೆಗಳಿಂದ ಷೋಡಶಾಂಗ ಪೂಜೆಯನ್ನು ಶ್ರಿ ಕೃಷ್ಣ ಪರಮಾತ್ಮನಿಗೆ ಮಾಡಬೇಕು. ಇಲ್ಲಿ ಉಪವಾಸವು ಮುಖ್ಯವಾದುದು. ಅಂದು ಸಂಯಮದ ದಿವಸ. ಪರಮಾತ್ಮನ ಸಹವಾಸದಲ್ಲಿಯೇ ಇದ್ದು, ಅದಕ್ಕೆ ಸಹಾಯಕವಾಗುವಂತೆ ಇಂದ್ರಿಯಗಳಿಗೆ ಭೌತಿಕವಾಗಿ ಆಹಾರವನ್ನು ಕೊಡದೇ, ಪೂಜೆ ಮುಗಿಯುವವರೆವಿಗೆ ಉಪವಾಸವಿದ್ದು, ತದನಂತರ ಮಹಾಪ್ರಸಾದವನ್ನು ಸ್ವೀಕರಿಸಬೇಕು.

ಪೂರ್ಣವಾಗಿ ಉಪವಾಸವನ್ನು ಮಾಡಲಾಗದ ಅಶಕ್ತರು ಲಘು ಆಹಾರವನ್ನು ಸೇವಿಸಬಹುದು. ರಾತ್ರಿಯೆಲ್ಲಾ ಜಾಗರಣೆ ಮಾಡಿ ಪರಮಾತ್ಮನ ಸ್ಮರಣೆಯನ್ನು ಮಾಡಬೇಕು. ಜಾಗರಣೆಯ ಸಮಯವನ್ನು ಭಗವಂತನ ಧ್ಯಾನ, ಸಂಕೀರ್ತನೆಗಳಿಗೆ ಮೀಸಲಾಗಿಡಬೇಕು. ದಾನದಕ್ಷಿಣೆಗಳನ್ನು ಯಥಾಶಕ್ತಿ ಸತ್ಪಾತ್ರರಿಗೆ ಕೊಡಬೇಕು.

ದೇವರ ಪೂಜಾ ಮಂಟಪ ವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಸಿಂಗರಿಸಬೇಕು. ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಹೊಸ್ತಿಲಿನಿಂದ ದೇವರ ಕೋಣೆಯವರೆಗೆ ಇರಿಸುವರು. ಶ್ರೀ ಕೃಷ್ಣನು ಬಾಲಕನ ರೂಪದಲ್ಲಿ ಮನೆಯೊಳಗೆ ಬರುವುದರ ಸೂಚನೆಯಿದು. ಅಂದು ದೇವಕೀ ದೇವಿಗಾಗಿ ಪ್ರಸವಗೃಹವನ್ನು ನಿರ್ಮಿಸುವರು. ಅದರಲ್ಲಿ ಮಂಗಳಕರವಾದ ಪೂರ್ಣಕುಂಭ, ಮಾವಿನ ಎಲೆಗಳು, ಪುಷ್ಪಮಾಲಿಕೆಗಳು, ಅಗರು ಧೂಪದ ಸುವಾಸನೆಯನ್ನು ಇರಿಸುವರು. ಹೊರಗೆ ಗೋಡೆಗಳ ಮೇಲೆ ದೇವ ಗಂಧರ್ವರು, ವಸುದೇವ, ದೇವಕಿ, ನಂದ, ಯಶೋಧೆ, ಗೋಪಿಕೆಯರು, ಕಂಸನ ಕಾವಲುಗಾರರು, ಯಮುನಾದೇವಿ, ಕಾಳಿಂಗ, ಮತ್ತು ಗೋಕುಲದ ಚಿತ್ರಗಳನ್ನು ಚಿತ್ರಿಸುವುದು ಉಂಟು.

ಮಂಟಪದಲ್ಲಿ ಸ್ವಾಮಿಯ ಮೂರ್ತಿಯನ್ನಿಟ್ಟು ಷೋಡಶಾಂಗ ಪೂಜಾವಿಧಾನದಲ್ಲಿ ಪೂಜಿಸಿ ನೈವೇದ್ಯವನ್ನು ಅರ್ಪಿಸಬೇಕು. 8 ಬಗೆಯ ಖಾರ ಮತ್ತು 8 ಬಗೆಯ ಸಿಹಿ ತಿನಿಸುಗಳನ್ನು ಮಾಡಿ ಅರ್ಪಿಸುವುದು ವಾಡಿಕೆ. ಈ ಹದಿನಾರು ಬಗೆಯ ತಿನಿಸುಗಳಲ್ಲಿ ಅವಲಕ್ಕಿಯಿಂದ ಮಾಡಿದ ತಿನಿಸುಗಳಿಗೆ ವಿಶೇಷ ಪ್ರಾಧಾನ್ಯ. ಈ ಸಂದರ್ಭದಲ್ಲಿ ವಿಷ್ಣು ಪುರಾಣ, ಶ್ರೀ ಮದ್ಭಾಗವತವನ್ನು ಪಾರಾಯಣ ಮಾಡುವರು.

ಮಥುರೆಯ ದೇಗುಲದಲ್ಲಿ ಇಂದು ಉತ್ಸವವನ್ನಾಚರಿಸುವರು. ಇಲ್ಲಿ ನೈವೇದ್ಯಕ್ಕಾಗಿ 64 ಬಗೆಯ ತಿನಿಸುಗಳನ್ನು ಅರ್ಪಿಸುವರು. ಇದರಲ್ಲಿ ವಿಶೇಷವಾದ ಒಂದು ತಿನಿಸೆಂದರೆ ಖೋವಾಪೂರಿ. ಹಾಲು ಸಕ್ಕರೆ ಮಿಶ್ರಣ ಮಾಡಿ ಕುದಿಸಿ, ಅದರಲ್ಲಿ ಬರುವ ಕೆನೆಯನ್ನು ತೆಗೆದು – ಅದನ್ನು ಪೂರಿಯಂತೆ ತುಪ್ಪದಲ್ಲಿ ಕರಿಯುವುದು. ಇದಲ್ಲದೇ ಒರಿಸ್ಸಾದಲ್ಲಿ ಜಗನ್ನಾಥನಿಗೂ ವಿಶೇಷ ಪೂಜೆ ಆಗುವುದು.

ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿ ಎಂದಾಚರಿಸಿ, ಬೀದಿ ಬೀದಿಗಳಲ್ಲಿ ಆಲಾರೇ ಗೋವಿಂದ ಎಂದು ಹಾಡಿಕೊಂಡು ಹುಡುಗ ಹುಡುಗಿಯರು ಗುಂಪು ಗುಂಪಾಗಿ ಹೋಗುವರು. ಅಲ್ಲಲ್ಲಿ ಕಟ್ಟಡಗಳ ಸಹಾಯದಿಂದ ಮೇಲೆ ಕಟ್ಟಿರುವ ಮೊಸರು ಗಡಿಗೆಯನ್ನು ಒಡೆಯುವರು. ಇದನ್ನು ದಹಿಹಂಡಿ ಎನ್ನುವರು.

LEAVE A REPLY

Please enter your comment!
Please enter your name here