ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಆತಂಕವನ್ನು ಸೃಷ್ಠಿಸಿದೆ. ಕೇರಳ ಕೋಯಿಕ್ಕೋಡ್‌ನಲ್ಲಿ ನಿಫಾ ವೈರಸ್‌ನಿಂದ ಸೆ.3 ರಂದು 12 ವರ್ಷದ ಬಾಲಕ ಮೃತನಾಗಿದ್ದು, ಮೃತಪಟ್ಟ ಬಾಲಕನ ಸಂಪರ್ಕದಲ್ಲಿದ್ದ 250ಕ್ಕೂ ಹೆಚ್ಚು ಜನರನ್ನು ಐಸೋಲೇಷನ್‌ನಲ್ಲಿಟ್ಟು ಕೇರಳ ರಾಜ್ಯ ಆರೋಗ್ಯ ಇಲಾಖೆ ತೀವ್ರ ನಿಗಾದಲ್ಲಿರಿಸಿದೆ.
ಕೇರಳದಲ್ಲಿ ಕೊರೊನಾ ಜೊತೆಗೆ ನಿಫಾ ವೈರಸ್ ಕೂಡಾ ಹರಡುತ್ತಿರುವುದರಿಂದ ಕೇರಳದ ಗಡಿ ಭಾಗ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್‌ನ್ನು ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದ್ದು, ತಕ್ಷಣ ಮುಂಜಾಗೃತಾ ಕ್ರಮಗಳನ್ನು ಜಾರಿಗೆ ಮಾಡುವಂತೆ ಸೂಚನೆ ನೀಡಲಾಗಿದೆ. ಸೋಂಕಿತ ಪ್ರಕರಣಗಳು ಕಂಡು ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ನಡುವೆ ಕೇರಳದಲ್ಲಿ ಸದ್ಯ ಇಬ್ಬರು ಆರೋಗ್ಯ ಸಿಬ್ಬಂದಿಗಳಲ್ಲಿ ನಿಫಾ ವೈರಸ್ ಹರಡಿರುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರ, ಕೇರಳದ ಜೊತೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಹೈಅಲರ್ಟ್‌ನ್ನು ಘೋಷಣೆ ಮಾಡಿದೆ. ಕೇರಳದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ನಿಫಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿಪತ್ರ ಬಿಡುಗಡೆ ಮಾಡಿದೆ. ನಿಫಾ ಸೋಂಕಿನ ಲಕ್ಷಣವಿರುವ ಜನರ ಮೇಲೆ ತೀವ್ರ ನಿಗಾ ವಹಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಕೇರಳದಿಂದ ಜ್ವರದ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಆಗಮಿಸುವ ಕೇರಳಿಗರನ್ನು ನಿಫಾ ಟೆಸ್ಟ್‌ಗೆ ಒಳಪಡಿಸುವಂತೆ ವೈದ್ಯರುಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.