ಧಾರವಾಡ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಬೇಡಿ; ಭಕ್ತರ ಒತ್ತಾಯ
ಧಾರವಾಡ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ತನಿಖೆಯನ್ನು ಎಸ್ಐಟಿ ಇಂದಿನಿಂದ ನಡೆಸಲಿದೆ ಮತ್ತೊಂದೆಡೆ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ತನಿಖೆ ನಡೆಸುತ್ತಿರುವುದು ಸೂಕ್ತವೇ ಆದರೂ ಈ ತನಿಖೆ ನೆಪದಲ್ಲಿ ಧರ್ಮಸ್ಥಳ ದೇವಸ್ಥಾನದ ಬಗ್ಗೆ ಅಪಪ್ರಚಾರ ಮಾಡಬಾರದು ಎಂದು ಧಾರವಾಡದ ಭಕ್ತರು ಆಗ್ರಹಿಸಿದ್ದಾರೆ.
ಭಕ್ತರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ, ಸರ್ಕಾರದ ಈ ತನಿಖೆ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಧರ್ಮಸ್ಥಳ ಒಂದು ಪವಿತ್ರ ಧಾರ್ಮಿಕ ಹಾಗೂ ಶಕ್ತಿ ಕೇಂದ್ರ. ಅಲ್ಲಿ ನಡೆದಿವೆ ಎನ್ನಲಾದ ಅಸಜ ಸಾವಿನ ಬಗ್ಗೆ ನಾವು ಕೇಳಿದ್ದೇವೆ. ಅದು ತನಿಖೆ ಕೂಡ ಆಗುತ್ತಿದೆ. ಆದರೆ, ಅದೇ ನೆಪದಲ್ಲಿ ದೇವಸ್ಥಾನದ ಬಗ್ಗೆ ಅಪಪ್ರಚಾರ ಮಾಡುವುದು ಬೇಡ ಎಂದರು.
ಎಸ್ಐಟಿ ತನಿಖೆ ನಡೆಯುತ್ತಿದೆ. ಅದನ್ನು ಅನೇಕರು ಸ್ವಾಗತಿಸಿದ್ದಾರೆ. ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆಯಾಗಲಿ. ಕಾನೂನಿಗೆ ಎಲ್ಲರೂ ಗೌರವ ಕೊಡಲೇಬೇಕು. ತನಿಖೆ ವರದಿ ಬರುವವರೆಗೂ ದೇವಸ್ಥಾನದ ಬಗೆಗಿನ ಅಪಪ್ರಚಾರ ನಿಲ್ಲಬೇಕು. ಧರ್ಮಸ್ಥಳ ಕ್ಷೇತ್ರದಿಂದ ಸಾಕಷ್ಟು ಸಾಮಾಜಿಕ ಕೆಲಸಗಳಾಗಿವೆ. ಈ ರೀತಿಯ ಅಪಪ್ರಚಾರದಿಂದ ಭಕ್ತರಿಗೆ ಸಾಕಷ್ಟು ನೋವಾಗಿದೆ ಎಂದರು.