ಧೋನಿ ಅಭಿಮಾನಿಯ ಮನೆ ನೋಡಿದ್ರೆ ಕಳೆದೋಗ್ತೀರಿ..!
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ನಾನಾ ರೀತಿಯಲ್ಲಿ ಅಭಿಮಾನವನ್ನು ತೋರುತ್ತಾರೆ. ಅಂತೆಯೇ ಇಲ್ಲೊಬ್ಬರು ಅಭಿಮಾನಿ ಅಭಿಮಾನದಿಂದ ಮನೆಯನ್ನೇ ಕಟ್ಟಿದ್ದಾರೆ.
ತಮಿಳುನಾಡಿನ ಕುಡ್ಡಾಲೂರ್‌ನ ಗೋಪಿ ಕೃಷ್ಣ ಅಭಿಮಾನದ ಮನೆ ಕಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಧೋನಿಗೆ ಗೌರವ ಸಲ್ಲಿಸಿರುವ ಹಳದಿ ಬಣ್ಣದ ಮನೆಯ ಫೋಟೊವನ್ನು ಶೇರ್ ಮಾಡಿದೆ. ತಮಿಳುನಾಡಿನ ಅರಂಗುರ್‌ನ ಗೋಪಿ ಕೃಷ್ಣನ್ ಹಾಗೂ ಅವರ ಕುಟುಂಬ ಸೂಪರ್ ಫ್ಯಾನ್, ತಮ್ಮ ಮನೆಯನ್ನು ಧೋನಿ ಅಭಿಮಾನಿ ಮನೆ ಎಂದು ಕರೆದಿದ್ದಾರೆ. ಹಳದಿ ಬಣ್ಣದಿಂದ ಹೃದಯವನ್ನು ತುಂಬುವ ಸೂಪರ್ ಡೂಪರ್ ಗೌರವವಿದು, ಅಂತ ಸಿ ಎಸ್ ಕೆ ಟ್ವೀಟ್ ಮಾಡಿದ್ದಾರೆ.
ಇಂಡಿಯಾ ಟುಡೇ ವರದಿ ಪ್ರಕಾರ, ಧೋನಿ ಅಭಿಮಾನಿ ತಮ್ಮ ಮನೆಗೆ ಸಿಎಸ್‌ಕೆ ಬಣ್ಣ ಹೊಡೆಯಲು ಸುಮಾರು 1.5 ಲಕ್ಷ ರೂಗಳನ್ನು ಖರ್ಚು ಮಾಡಿದ್ದಾರೆ. ಗೋಪಿ ಕೃಷ್ಣನ್ ಮೂಲತಃ ತಮಿಳುನಾಡಿನವರಾಗಿದ್ದು, ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಎಸ್ ಧೋನಿ ಆಟವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದೇ ಇರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ಎಂಎಸ್ ಧೋನಿಯ ಆಟವನ್ನು ನೇರವಾಗಿ ನೋಡಲು ಸಾಧ್ಯವಾಗದೇ ಇರುವುದಕ್ಕೆ ಹಾಗೂ ಪ್ರಸಕ್ತ ಆವೃತ್ತಿಯಲ್ಲಿ ಧೋನಿ ಕಳಪೆ ಆಟದ ಬಗ್ಗೆ ಸಾಕಷ್ಟು ಜನ ಟೀಕಿಸುತ್ತಿದ್ದಾರೆ, ಈ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ನಾನು ಅವರಿಗೆ ಪ್ರೇರಣೆ ತುಂಬಬೇಕು, ಪಂದ್ಯದಲ್ಲಿ ಸೋಲಲಿ ಅಥವಾ ಗೆಲ್ಲಲಿ ನಾವು ಯಾವಾಗಲೂ ಸಹಕಾರ ನೀಡುತ್ತೇವೆ,” ಎಂದು ಗೋಪಿ ಕೃಷ್ಣನ್ ಹೇಳಿರುವುದಾಗಿ ವರದಿಯಾಗಿದೆ.