ನಂದಿ ಬೆಟ್ಟಕ್ಕೆ ಹೋಗುವ ಮುನ್ನ ಎಚ್ಚರ

0
35

ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋಗಿದೆ. ಈ ಹಿನ್ನಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ 20 ದಿನಗಳ ಕಾಲ ನಂದಿ ಗಿರಿಧಾಮ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ. ಆರ್ ಹೇಳಿದ್ದಾರೆ. ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಸ್ತೆ ಕೊಚ್ಚಿ ಹೋಗಿದ್ದು, ಶಾಶ್ವತ ಕಾಮಗಾರಿ ಮುಗಿಯತನಕ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಗಿರಿಧಾಮದ ಮೇಲೆರುವ ವಸತಿ ಗೃಹಗಳಿಗೆ ಅವಕಾಶ ಇಲ್ಲ. ನಿನ್ನೆ ರಾತ್ರಿ ತಂಗಿದ್ದವರನ್ನು ಪರ್ಯಾಯ ಮಾರ್ಗದ ಮೂಲಕ ಕೆಳಗಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದಲ್ಲಿ ಭಾರಿ ಮಳೆಯ ಪರಿಣಾಮ ನಗರದ ಜೈಭೀಮ್ ಬಡಾವಣೆ, ಶಾಂತಿನಗರ ಹಾಗೂ ಶನಿಮಹಾತ್ಮ ದೇಗುಲ ಬಳಿಯ ಬಡಾವಣೆ ಜಲಾವೃತವಾಗಿದೆ. ಇದರಿಂದಾಗಿ ಮನೆಗಳಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ನೀರು ಪಾಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡದ ಹಿನ್ನೆಲೆ ಜಲಾವೃತವಾಗಿದೆ ಎಂಬ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

 

ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದ ಬ್ರಹ್ಮಗಿರಿಯಲ್ಲಿ ಭೂಕುಸಿತವಾಗಿದ್ದು, ಇದರಿಂದಾಗಿ ನಂದಿ ಬೆಟ್ಟಕ್ಕೆ ಸಂಚರಿಸುವ ರಸ್ತೆ ಸಂಚಾರ ಬಂದ್​ ಆಗಿದೆ. ಪರಿಣಾಮ ಈ ವಾರದ ಕೊನೆಗೆ ನಂದಿ ಗಿರಿಧಾಮ ನೋಡಲು ಹೋಗುವ ಪ್ರವಾಸಿಗರಿಗೆ ನಿರಾಸೆಯಾಗಿದೆ. ಬುಧವಾರ ಸ್ಥಳಕ್ಕೆ ಚಿಕ್ಕಬಳ್ಳಾಪುರ ತಹಶೀಲ್ದಾರ ಗಣಪತಿ ಶಾಸ್ತ್ರಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಡ್ಡ ಕುಸಿತದಿಂದ ಗಿರಿಧಾಮದ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ಸಂಚಾರಕ್ಕೆ ಪೂರಕವಾಗಿ ಮಾಡಲು ಒಂದು ವಾರ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ನಂದಿ ಗಿರಿಧಾಮದ ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿತ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಚ್ಚಿ ಹೋದ ರಸ್ತೆಯನ್ನು ಜೆಸಿಬಿ ಮೂಲಕ ದುರಸ್ಥಿ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಂತೋಷ್ ನೇತೃತ್ವದಲ್ಲಿ ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿದೆ.

ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಗಿರಿಧಾಮದಿಂದ ಬೆಂಗಳೂರಿಗೆ ಬರಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕಾರುಗಳು ಕೆಳಗೆ ಬರಲಾಗದೆ ಇದ್ದಿದ್ದರಿಂದ ಕಾಲ್ನಡಿಗೆಯಲ್ಲಿ ಸುಲ್ತಾನ ಪೇಟೆ ಮಾರ್ಗವಾಗಿ ಕೆಳಗೆ ಇಳಿಯಲು ಪ್ರವಾಸೋದ್ಯಮ (ಕೆಎಸ್​​ಟಿಡಿಸಿ) ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.

30ಕ್ಕೂ ಹೆಚ್ಚು ಜನ ಪ್ರವಾಸಿಗರು ಬೆಟ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಸುಲ್ತಾನ ಪೇಟೆಯಿಂದ ಬೆಂಗಳೂರು ತಲುಪಲು ಕೆಎಸ್​​ಟಿಡಿಸಿಯ ಬಸ್​ಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್​​ಟಿಡಿಸಿ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

 

 

LEAVE A REPLY

Please enter your comment!
Please enter your name here