ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು
ಬೆಂಗಳೂರು: ನಟಿ ಕಾರುಣ್ಯ ರಾಮ್ ಅವರಿಗೆ ಸಾಲಗಾರರ ಕಾಟ ಎದುರಾಗಿದ್ದು, ಈ ಸಂಬಂಧ ಅವರು ತಮ್ಮ ತಂಗಿಯೇ ಆದ ಸಮೃದ್ಧಿ ರಾಮ್ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಟಿ ಕಾರುಣ್ಯ ರಾಮ್ ಅವರು ನೀಡಿರುವ ದೂರಿನ ಪ್ರಕಾರ, ತಂಗಿ ಸಮೃದ್ಧಿ ರಾಮ್ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಸುಮಾರು 25 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಕಾರುಣ್ಯ ರಾಮ್ ಅವರೊಂದಿಗೆ ಮನೆಯಲ್ಲೇ ವಾಸವಾಗಿದ್ದ ಸಮೃದ್ಧಿ ರಾಮ್, ಈ ನಷ್ಟವನ್ನು ಭರಿಸಲು ಖಾಸಗಿ ವ್ಯಕ್ತಿಗಳಿಂದ 25 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲದೆ, ವ್ಯವಹಾರದಲ್ಲಿಯೂ ನಷ್ಟ ಅನುಭವಿಸಿದ್ದ ಸಮೃದ್ಧಿ ರಾಮ್, ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ತಮ್ಮದೇ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರವನ್ನು ಪ್ರಶ್ನಿಸಿದಾಗ ಸಮೃದ್ಧಿ ರಾಮ್ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ನಟಿ ತಿಳಿಸಿದ್ದಾರೆ.
ಸಮೃದ್ಧಿ ರಾಮ್ ಅವರಿಗೆ ಹಣ ನೀಡಿದ್ದ ವ್ಯಕ್ತಿಗಳು ಬಳಿಕ ಕಾರುಣ್ಯ ರಾಮ್ ಅವರನ್ನು ಹಿಂಬಾಲಿಸಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ಮನೆ ಬಳಿ ಬಂದು ಗಲಾಟೆ ನಡೆಸುವುದು, ವಾಟ್ಸ್‌ಆ್ಯಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ಫೋಟೋಗಳಿಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿರುವ ಆರೋಪ ಕೇಳಿಬಂದಿದೆ. “ಅವಾರ್ಡ್ ಫಾರ್ ಚೀಟರ್ಸ್” ಸೇರಿದಂತೆ ಅವಾಚ್ಯ ಪದಗಳನ್ನು ಬಳಸಿ ನಿಂದನೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಬಗ್ಗೆ ನಟಿ ಕಾರುಣ್ಯ ರಾಮ್ ಅವರು ಈಗಾಗಲೇ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಲ್ಲಿ ಎನ್‌ಸಿಆರ್ ದಾಖಲಿಸಲಾಗಿದೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಸಿಸಿಬಿ ಪೊಲೀಸರಿಗೂ ದೂರು ಸಲ್ಲಿಸಿದ್ದಾರೆ.
ಸದ್ಯ ಸಿಸಿಬಿ ಪೊಲೀಸರು ದೂರನ್ನು ಸ್ವೀಕರಿಸಿ ಪರಿಶೀಲನೆ ನಡೆಸುತ್ತಿದ್ದಾರೆ.






