ತಾಲ್ಲೂಕಿನ ಹರನಹಳ್ಳಿ ಗ್ರಾಮದ ಹೊರವಲಯದಲ್ಲಿನ ಹಳ್ಳದಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದು ಸಾರ್ವಜನಿಕರು ಆತಂಕದಲ್ಲಿದ್ದಾರೆ.
ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ನದಿಯ ನೀರಿನ ಜೊತೆಗೆ ಮೊಸಳೆಗಳು ಹರಿದು ಬಂದು ಹಳ್ಳದಲ್ಲಿ ಸೇರಿಕೊಂಡಿವೆ.
ಹಳ್ಳದಲ್ಲಿ ನೀರು ಕಡಿಮೆಯಾಗಿರುವುದರಿಂದ ದಂಡೆಯ ಮೇಲೆ ಬರುತ್ತಿವೆ.
ರಾಜೋಳ್ಳಿ ಹಾಗೂ ಹರನಹಳ್ಳಿ ಗ್ರಾಮದ ಜನರು ಹಳ್ಳದ ನೀರನ್ನು ಬಳಸುತ್ತಿದ್ದು, ಜಮೀನುಗಳಿಗೆ ಪಂಪ್ ಸೆಟ್ ಗಳನ್ನು ಹಳ್ಳದಲ್ಲಿ ಅಳವಡಿಸಿದ್ದಾರೆ. ಜಾನುವಾರುಗಳು ನೀರು ಕುಡಿಯಲು ಹಳ್ಳಕ್ಕೆ ಬರುವುದರಿಂದ ಜನರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಗಳನ್ನು ಹಿಡಿದು ಸ್ಥಳಾಂತರಿಸುವಂತೆ ಆಗ್ರಹಿಸುತ್ತಿದ್ದಾರೆ.
ತಾಲ್ಲೂಕು ವಲಯ ಅರಣ್ಯಧಿಕಾರಿ ರಾಜೇಶ ನಾಯಕ ಮಾತನಾಡಿ, ತುಂಗಭದ್ರಾ ನದಿ ಮೊಸಳೆಗಳ ವಾಸ ಸ್ಥಾನವಾಗಿದೆ. ನದಿಯಲ್ಲಿ ಹೆಚ್ಚಿನ ನೀರು ಬಂದ ಕಾರಣ ಕೆರೆ ಮತ್ತು ಹಳ್ಳಗಳಲ್ಲಿ ಮೊಸಳೆಗಳು ಸೇರಿಕೊಂಡಿರುವ ಸಾಧ್ಯತೆಗಳಿವೆ. ಪರಿಶೀಲನೆ ನಡೆಸಿ ಇಲಾಖೆಯ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳುಹಿಸಿ ಮೊಸಳೆಗಳನ್ನು ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.