ಈಗಾಗಲೇ ಸುಮಲತಾ ಅವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸೇರಿದಂದೆ ಹಲವರು ಬೆಂಬಲ ಸೂಚಿಸಿದ್ದಾರೆ. ಹಾಗಾದ್ರೆ, ನಿಖಿಲ್ ಪರ ಯಾವ ಸ್ಟಾರ್ ಗಳು ಅಖಾಡಕ್ಕೆ ಇಳಿಯಬಹುದು? ಎಂಬ ಪ್ರಶ್ನೆ ಕಾಡುತ್ತಿದೆ.
ಅಂದ್ರೆ, ನಿಖಿಲ್ ಪರವಾಗಿ ಪ್ರಚಾರ ಮಾಡಲು ಯಾರಾದರೂ ಕಲಾವಿದರನ್ನ ಕರೆತರುವ ಪ್ಲಾನ್ ಮಾಡಿದ್ದಾರಾ? ಈ ಬಗ್ಗೆ ಸ್ವತಃ ನಿಖಿಲ್ ಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ. ನಿಖಿಲ್ ಪರವಾಗಿ ಇಂಡಸ್ಟ್ರಿ ಬೆಂಬಲ ಇದೆಯಾ ಎಂದು ಕೇಳಿದ್ದಕ್ಕೆ ”ಯಾರೂ ಇಲ್ಲ, ನಾನು ಪ್ರಚಾರಕ್ಕೆ ಬನ್ನಿ ಎಂದು ಯಾರನ್ನು ಅಪ್ರೊಚ್ ಮಾಡಿಲ್ಲ ಅಥವಾ ಯಾರೂ ನನಗೂ ಅಪ್ರೋಚ್ ಮಾಡಿಲ್ಲ” ಎಂದು ಹೇಳುವ ಮೂಲಕ ಜೆಡಿಎಸ್ ಪಕ್ಷದ ಪರ ಯಾವ ಸೆಲೆಬ್ರಿಟಿಯೂ ಮಂಡ್ಯಕ್ಕೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ”ನಾನು ಕೂಡ ಚಿತ್ರರಂಗದಲ್ಲಿ ಒಬ್ಬ ನಟ. ನನ್ನ ವೈಯಕ್ತಿಕ ರಾಜಕೀಯಕ್ಕಾಗಿ ಯಾರನ್ನು ದುರುಪಯೋಗ ಪಡಿಸಿಕೊಳ್ಳಲು ಇಷ್ಟವಿಲ್ಲ.
ನನಗೆ ಕಾರ್ಯಕರ್ತರಿದ್ದಾರೆ, ಅವರೇ ನನ್ನ ಸೈನಿಕರು. ಅವರೇ ಸಾಕು, ಬೇರೆ ಯಾರೂ ಬೇಡ” ಎಂದು ಮಂಡ್ಯ ಲೋಕಸಭೆ ಅಭ್ಯರ್ಥಿ ನಿಖಿಲ್ ಹೇಳಿದ್ದಾರೆ. ಇನ್ನು ಸುಮಲತಾ ಎದುರು ನಿಖಿಲ್ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆ ಅಂಬರೀಶ್ ಪುತ್ರ ಅಭಿಷೇಕ್ ಜೊತೆ ನಿಖಿಲ್ ಸಂಬಂಧ ಹೇಗಿದೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.
ಈ ಬಗ್ಗೆ ಮಾತನಾಡಿದ ನಿಖಿಲ್ ”ರಾಜಕಾರಣ ಬೇರೆ, ಸಂಬಂಧ ಬೇರೆ. ಅಭಿಷೇಕ್ ಮತ್ತು ನಾನು ಒಳ್ಳೆಯ ಸ್ನೇಹಿತರು, ನಾನು ಅವರ ಸ್ನೇಹವನ್ನ ಕಡಡಿದುಕೊಳ್ಳುವುದಿಲ್ಲ” ಎಂದಿದ್ದಾರೆ. ನಿಖಿಲ್ ಅವರ ಪರವಾಗಿ ಯಾರೂ ಬರುವುದಿಲ್ಲ ಎಂಬುದನ್ನ ಸ್ವತಃ ಅವರೇ ಖಚಿತಪಡಿಸಿದ್ದಾರೆ.